

ಮಂಗಳೂರು: ಕೋಟ್ಯಂತರ ಭಕ್ತರ ಶ್ರದ್ಧಾಕೇಂದ್ರ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮನಿಗೆ ಪ್ರತ್ಯೇಕ ಸೇವೆ ಇರುವುದಿಲ್ಲ. ರಾಮಾರ್ಪಣೆಯೇ ಸೇವೆ. ಇಂಥ ಅಪೂರ್ವ ಯೋಚನೆ ಹೊಸ ಮೇಲ್ಪಂಕ್ತಿಯನ್ನು ಹುಟ್ಟುಹಾಕಲಿದೆ ಎಂದು ಶ್ರೀರಾಮ ಮಂದಿರ ವಿಶ್ವಸ್ಥರಾಗಿರುವ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಶ್ರೀರಾಮ ಮಂದಿರ ನಿರ್ಮಾಣದ ಮೂಲಕ ದೇಶದಲ್ಲಿ ರಾಮ ರಾಜ್ಯದ ಕನಸು ನನಸಾಗಲಿದೆ ಎಂಬ ಆಶಯ ಎಲ್ಲರದ್ದು. ಪ್ರತಿಯೊಬ್ಬ ಭಕ್ತರೂ ಮಾಡಿದ ಸಮಾಜಸೇವೆಯನ್ನು ಶ್ರೀರಾಮನ ಸಾನ್ನಿಧ್ಯದಲ್ಲಿ ನಿವೇದಿಸಿಕೊಳ್ಳುವ ರಾಮಾರ್ಪಣೆಯೇ ಸೇವೆ. ಭಕ್ತರಿಗೆ ಆರತಿ, ತೀರ್ಥ ಹಾಗೂ ಉತ್ತರ ಭಾರತದ ಸಿಹಿಯ ನೈವೇದ್ಯ ಇರುತ್ತದೆ. ಇದು ಬಿಟ್ಟರೆ ಪ್ರತ್ಯೇಕ ಸೇವೆ, ಹರಕೆ ಇರುವುದಿಲ್ಲ ಎಂದು ಸೋಮವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಮ್ಮ ನಮ್ಮ ಊರು, ಕೇರಿ, ಗ್ರಾಮಗಳಲ್ಲಿ ದುರ್ಬಲ, ಅಶಕ್ತರಿಗೆ, ದೀನರಿಗೆ ಕೈಲಾದ ರೂಪದಲ್ಲಿ ನೆರವಾಗಬೇಕು. ವಿವಾಹ, ಮನೆ ನಿರ್ಮಾಣ, ಉಚಿತ ಚಿಕಿತ್ಸೆ ಮೊದಲಾದ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆಡಂಬರದ ವಿವಾಹ, ಆಚರಣೆಗಳ ಬದಲು ಆ ಮೊತ್ತವನ್ನು ಸಮಾಜಸೇವೆಗೆ ನೀಡಿ ಕೃತಾರ್ಥರಾಗುವುದೇ ರಾಮನ ಸೇವೆ, ಅರ್ಥಾತ್ ದೇಶಸೇವೆ ಎಂದು ಹೇಳಿದರು.
ಅಭಿಜಿನ್ ಮುಹೂರ್ತದಲ್ಲಿ ಪ್ರತಿಷ್ಠಾಪನೆ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ 2024ರ ಜನವರಿ 22ರಿಂದ ಮಾ.10ರವರೆಗೆ 48 ದಿನ ನಡೆಯಲಿದೆ. ಜ.22ರಂದು ಅಭಿಜಿನ್ ಮುಹೂರ್ತದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ ಎಂದು ಪೇಜಾವರ ಶ್ರೀ ತಿಳಿಸಿದರು. ರಾಮನ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪಾಲ್ಗೊಳ್ಳಲು ಅನನುಕೂಲ ಆಗಬಹುದು. ಉಳಿದ 48 ದಿನಗಳ ಮಂಡಲೋತ್ಸವದಲ್ಲಿ ದೇಶದ ಎಲ್ಲರೂ ಪಾಲ್ಗೊಳ್ಳುವಂತೆ ಮುಕ್ತ ಆಹ್ವಾನ ನೀಡುವುದಾಗಿ ತಿಳಿಸಿದರು.
ಕರಸೇವಕಪುರಂನಿಂದ ಮೆರವಣಿಗೆ
ಜ.17ರಂದು ಅಯೋಧ್ಯೆಗೆ ಶ್ರೀರಾಮನ ವಿಶಾಲ ಶಿಲಾವಿಗ್ರಹದ ಮೆರವಣಿಗೆ ನಡೆಯಲಿದೆ. ಸುಮಾರು ಐದಾರು ಅಡಿ ಎತ್ತರದ ಶ್ರೀರಾಮನ ಶಿಲಾಪ್ರತಿಮೆಯನ್ನು ಕರಸೇವಕಪುರಂನಿಂದ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು ಎಂದು ವಿಶ್ವಪ್ರಸನ್ನ ತೀರ್ಥ ಶ್ರೀಗಳು ಮಾಹಿತಿ ನೀಡಿದರು. ಸರಯೂ ನದಿಯಲ್ಲಿ ಶಿಲಾಮೂರ್ತಿಗೆ ಅಭಿಷೇಕ ನೆರವೇರಿಸಿ ಅಲ್ಲಿಂದ ಮತ್ತೆ ಮೆರವಣಿಗೆಯಲ್ಲಿ ಅಯೋಧ್ಯೆಗೆ ಕೊಂಡೊಯ್ದು ಜ.18ರಂದು ಶ್ರೀರಾಮ ಜನ್ಮಸ್ಥಳದ ಮೂಲಸ್ಥಾನದಲ್ಲಿ ನಿಲ್ಲಿಸಲಾಗುವುದು. ಜ.22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗಿ ಮಂದಿರ ಉದ್ಘಾಟನೆ ಬಳಿಕ ಮೂರು ಗಂಟೆಗಳ ಕಾಲ ಸಭಾ ಕಾರ್ಯಕ್ರಮ ನಡೆಯಲಿದೆ. ಹಾಲಿ ಪೂಜೆಗೊಳ್ಳುತ್ತಿರುವ ಶ್ರೀರಾಮನ ಮೂರ್ತಿ ಕೂಡ ಅಲ್ಲೇ ಪ್ರತಿಷ್ಠಾಪನಗೊಳ್ಳಲಿದೆ ಎಂದರು.
ನೇರಪ್ರಸಾರ, ದೀಪೋತ್ಸವ
ಅಯೋಧ್ಯೆಯಲ್ಲಿ ಮಂದಿರ ಉದ್ಘಾಟನೆ ಕಾರ್ಯಕ್ರಮದ ನೇರಪ್ರಸಾರ ವ್ಯವಸ್ಥೆಗೊಳಿಸಿದ್ದು, ದೇಶ, ವಿದೇಶಗಳಲ್ಲಿ ವೀಕ್ಷಣೆಗೆ ಅವಕಾಶವಿದೆ. ಅಂದು ರಾತ್ರಿ ಐದು ಶತಮಾನದ ಸಂಕೇತವಾಗಿ ಐದು ದೀಪಗಳನ್ನು ಪ್ರತಿ ಮನೆಗಳಲ್ಲೂ ಬೆಳಗುವ ಮೂಲಕ ಇದನ್ನು ದೀಪೋತ್ಸವವಾಗಿಯೂ ಆಚರಿಸಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು. 48 ದಿನವೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ರಾಜ್ಯಗಳ ಸಂಸ್ಕೃತಿ ಸಾರುವ ಕಲಾತಂಡಗಳ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಗಿದೆ. ಈ ಮೂಲಕ ದೇಶದ ಸಾಂಸ್ಕೃತಿಕ ಜಗತ್ತು ಅಯೋಧ್ಯೆಯಲ್ಲಿ ಅನಾವರಣಗೊಳ್ಳಲಿದೆ ಎಂದರು.
ಸವಾಜ ಸೇವೆಗೆ 10 ಲಕ್ಷ ರೂ.
ವಿನಿಯೋಗಿಸಿದವರಿಗೆ ರಜತ ಕಲಶ
ಶ್ರೀರಾಮ ದೇವರಿಗೆ ವಿಶೇಷ ಸೇವೆ ಸಮರ್ಪಣೆ ಇರುವುದಿಲ್ಲ. 48 ದಿನ ನಡೆಯುವ ಮಂಡಲೋತ್ಸವದಲ್ಲಿ ಕಲಶ ಸೇವೆ ಸಲ್ಲಿಸಬಹುದು. ಒಂದು ರಜತ ಕಲಶಕ್ಕೆ ಒಂದು ಲಕ್ಷ ರೂ. ನಿಗದಿ ವಾಡಲಾಗಿದೆ. ಕಲಶಾಭಿಷೇಕದ ನಂತರ ಪ್ರಸಾರ ರೂಪದಲ್ಲಿ ಅದನ್ನು ಸೇವಾಕರ್ತರಿಗೆ ಮರಳಿಸಲಾಗುವುದು. ಒಂದು ವರ್ಷದ ಅವಧಿಯಲ್ಲಿ 10 ಲಕ್ಷ ರೂ. ಮೊತ್ತವನ್ನು ಸವಾಜಸೇವೆಗೆ ವಿಯೋಗಿಸಿದವರು ಕಲಶ ಸೇವೆ ಪಡೆಯಲು ಅರ್ಹರಾಗಿರುತ್ತಾರೆ. ಸೇವಾಕರ್ತರ ನೋಂದಣಿಗೆ ವಿಶೇಷ ಆ್ಯಪ್ ರೂಪಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
2023_-24ನೇ ಹಣಕಾಸು ವರ್ಷದಲ್ಲಿ ಮನೆ ನಿರ್ವಾಣ, ಆರೋಗ್ಯಕ್ಕೆ ನೆರವು, ಶಿಕ್ಷಣಕ್ಕೆ ನೆರವು, ಗೋ ಸೇವೆಗೆ ಹಣ ವಿನಿಯೋಗಿಸಿದವರು ತಮ್ಮ ಸೇವೆಯ ವಿವರಗಳನ್ನು ಗೆಜೆಟೆಡ್ ಆಫೀಸರ್ ಮೂಲಕ ದಢಪಡಿಸಿಕೊಂಡು ಅಯೋಧ್ಯೆ ಮಂಡಲೋತ್ಸವ ಡಾಟ್ ಕಾಮ್‌ನಲ್ಲಿ ಹೆಸರು ನೋಂದಣಿ ವಾಡಬೇಕು. ಡಿಸೆಂಬರ್ 1ರಂದು ಆ್ಯಪ್ ಉದ್ಘಾಟನೆಗೊಳ್ಳಲಿದೆ ಎಂದು ಗುರುವಾರ ಉಡುಪಿಯಲ್ಲಿ ಸುದ್ದಿಗೋಷ್ಠೀಯಲ್ಲಿ ಮಾಹಿತಿ ನೀಡಿದರು.
ರಜತ ಕಲಶ ಸೇವೆಗೆ ನೋಂದಣಿ ವಾಡಿಕೊಂಡವರು 48 ದಿನದಲ್ಲಿ ತಮಗೆ ಅನುಕೂಲವಾದ ದಿನವನ್ನು ಆಯ್ಕೆ ವಾಡಿಕೊಳ್ಳಬಹುದು. ಇದರೊಂದಿಗೆ 48 ದಿನದಲ್ಲಿ ಅಯೋಧ್ಯೆಯಲ್ಲಿ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ, ಪೌರೋಹಿತ್ಯ ಇತ್ಯಾದಿ ಸೇವೆ ಸಲ್ಲಿಸುವವರಿಗೂ ಅವಕಾಶ ಕಲ್ಪಿಸಲಾಗಿದೆ. ಅವರು ಕೂಡ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಸರು ನೋಂದಾಯಿಸಿಕೊಂಡವರಿಗೆ ರಾಮಜನ್ಮಭೂಮಿ ಕ್ಷೇತ್ರ ಟ್ರಸ್ಟ್ ಧಾರ್ಮಿಕ ಸಮಿತಿಯಿಂದ ಸರ್ಟಿಫಿಕೆಟ್ ನೀಡಲಾಗುವುದು. ಇದರ ಆಧಾರದಲ್ಲಿ ಪಾಸ್‌ಗಳನ್ನು ವಿತರಿಸಲಾಗುವುದು ಎಂದರು.