ಆಯೋಧ್ಯೆ ಪ್ರಾಣಪ್ರತಿಷ್ಠೆಗೆ ಪ್ರಧಾನಿಗೆ ಪ್ರಥಮ ಆಹ್ವಾನ

udp-25-modi
Published on

ಉಡುಪಿ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಪದಾಧಿಕಾರಿಗಳು ಬುಧವಾರ ಸಾಯಂಕಾಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಅಯೋಧ್ಯೆ ರಾಮಮಂದಿರದಲ್ಲಿ ದೇವರ ಪ್ರಾಣಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಆಹ್ವಾನ ನೀಡಿದರು.

ಈ ಸಂದರ್ಭದಲ್ಲಿ ಟ್ರಸ್ಟ್​ ಕಾರ್ಯದರ್ಶಿ ಚಂಪತ್​ ರಾಯ್​, ಕೋಶಾಧಿಕಾರಿ ಸ್ವಾಮಿ ಗೋವಿಂದಗಿರಿ, ಸದಸ್ಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಮಂದಿರ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಉಪಸ್ಥಿತರಿದ್ದರು.

ಈ ಬಗ್ಗೆ ವಿಜಯವಾಣಿಯೊಂದಿಗೆ ಮಾತನಾಡಿದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಸದಸ್ಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಜನವರಿ 17ರಂದು ರಾಮನ ಮೂರ್ತಿಯನ್ನು ಅಯೋಧ್ಯೆಗೆ ತರಲಾಗುವುದು. 18 ರಿಂದ 20ರವರೆಗೆ ಅಧಿವಾಸ. 21ಕ್ಕೆ ಪೂರ್ವ ತಯಾರಿ, 22ಕ್ಕೆ ಪ್ರಾಣಪ್ರತಿಷ್ಠೆ ನಡೆಯಲಿದೆ. ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಧನ್ಯತೆ ಪ್ರಕಟಿಸಿದ ಪ್ರಧಾನಿ
ರಾಮದೇವರ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಪ್ರಥಮ ಅಹ್ವಾನ ಸ್ವೀಕರಿಸಿದ ಬಗ್ಗೆ ಪ್ರಧಾನಿಯವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಜಯ್​ ಸಿಯಾ ರಾಮ್​!ಇಂದಿನ ದಿನ ಭಾವನೆಗಳಿಂದ ತುಂಬಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಪದಾಧಿಕಾರಿಗಳು ನನ್ನನ್ನು ಭೇಟಿಯಾಗಲು ನನ್ನ ನಿವಾಸಕ್ಕೆ ಬಂದಿದ್ದರು. ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾ ಪರ್ವಕಾಲದಲ್ಲಿ ಅಯೋಧ್ಯೆಗೆ ಬರುವಂತೆ ಅವರು ನನ್ನನ್ನು ಆಹ್ವಾನಿಸಿದ್ದಾರೆ.ಇದರಿಂದ ಧನ್ಯನಾಗಿದ್ದೇನೆ. ಈ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುವುದು ನನ್ನ ಜೀವಿತಾವಧಿಯ ಸೌಭಾಗ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net