ಅಯೋಧ್ಯೆ ಶ್ರೀರಾಮಲಲ್ಲಾ ಮೂರ್ತಿ ಶಿಲೆಗೂ ದಂಡ!

6
Published on


ಆರ್.ಕೃಷ್ಣ ಮೈಸೂರು
ಇಡೀ ದೇಶವೇ ಎದುರು ನೋಡುತ್ತಿರುವ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ‘ಶ್ರೀರಾಮಲಲ್ಲಾ’ ಮೂರ್ತಿ ಅರಳಿರುವ ಕಲ್ಲಿಗೂ ದಂಡ ಬಿದ್ದಿದೆ…!
ಹೌದು !….ಶ್ರೀರಾಮನ ಮೂರ್ತಿ ಮೂಡಿ ಬಂದಿರುವ ಕೃಷ್ಣಶಿಲೆಗೆ ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು 80 ಸಾವಿರ ರೂ. ದಂಡ ವಿಧಿಸಿದ್ದು, ಇದನ್ನು ಗುತ್ತಿಗೆದಾರರಾದ ಶ್ರೀನಿವಾಸ್ ನಟರಾಜ್ ಪಾವತಿಸಿದ್ದಾರೆ. ದಂಡ ಬಿದ್ದ ಕೃಷ್ಣಶಿಲೆ ಈಗ ರಾಮನ ಮೂರ್ತಿಯಾಗಿದ್ದು, ಇಡೀ ದೇಶವೇ ಪೂಜೆಗೆ ಸಿದ್ಧಗೊಂಡಿದೆ.
ಎಚ್.ಡಿ.ಕೋಟೆ ರಸ್ತೆಯ ಹಾರೋಹಳ್ಳಿ-ಗುಜ್ಜೇಗೌಡನಪುರದಲ್ಲಿ ಜಮೀನಿನ ಮಾಲೀಕರಾದ ರಾಮದಾಸ್ ಅವರು ನೆಲ ಸಮತಟ್ಟು ಮಾಡಲು ಗುತ್ತಿಗೆದಾರ ಶ್ರೀನಿವಾಸ್ ನಟರಾಜ್ ಅವರಿಗೆ ಗುತ್ತಿಗೆ ನೀಡಿದ್ದರು. ನೆಲ ಸಮತಟ್ಟು ಮಾಡುವ ವೇಳೆ ಜಮೀನಿನಲ್ಲಿ ಶಿಲೆ ಮಾಡಲು ಯೋಗ್ಯವಾದ ಕೃಷ್ಣಶಿಲೆ ದೊರೆಯುತ್ತಿದ್ದವು. ಈ ವಿಷಯ ತಿಳಿದ ಹಲವು ಶಿಲ್ಪಿಗಳು ಇಲ್ಲಿಗೆ ಬಂದು ಕೃಷ್ಣಶಿಲೆಯನ್ನು ತೆಗೆದುಕೊಂಡು ಹೋಗುತ್ತಿದ್ದರು.
ಈಗ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮಲಲ್ಲಾ ಮೂರ್ತಿ ಅರಳಿರುವ ಕೃಷ್ಣಶಿಲೆಯೂ ದೊರೆತಿತ್ತು. ಜಮೀನಿನ 10 ಅಡಿ ಆಳದಲ್ಲಿ 2022ರಲ್ಲಿ ದೊರೆತ ಭಾರಿ ಗಾತ್ರವಿದ್ದ ಕಲ್ಲನ್ನು ಮೂರು ಭಾಗವಾಗಿ ಮಾಡಿ ಮೇಲೆತ್ತಲಾಯಿತು. ಆಗ ಅಯೋಧ್ಯೆಗೆ ಈ ಶಿಲೆ ಹೋಗುತ್ತದೆ ಎನ್ನುವ ಕಲ್ಪನೆ ಯಾರಿಗೂ ಇರಲಿಲ್ಲ.
ನೆಲದಿಂದ ಹೊರ ತೆಗೆದು ಜಮೀನಿನಲ್ಲಿ ಇಟ್ಟಿದ್ದ ಕಲ್ಲುಗಳನ್ನು ಕಂಡ ಕೆಲವರು, ಜಮೀನಿನಲ್ಲಿ ಅನಧಿಕೃತ ಗಣಿಗಾರಿಕೆ ನಡೆಯುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಅಧಿಕಾರಿಗಳು, ಭಾರಿ ಗಾತ್ರದ ಕಲ್ಲುಗಳನ್ನು ಹೊರ ತೆಗೆಯಬೇಕಾದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಈಗ ಕಲ್ಲು ತೆಗೆದಿರುವುದು ಅನಧಿಕೃತ ಎಂದು ಹೇಳಿ ಕಲ್ಲುಗಳ ಗಾತ್ರದ ಆಧಾರದ ಮೇಲೆ ಒಟ್ಟು 80 ಸಾವಿರ ರೂ. ದಂಡ ವಿಧಿಸಿದ್ದರು.
ಕಲ್ಲು ತೆಗೆಯಲು ಅನುಮತಿ ಪಡೆಯಬೇಕು ಎನ್ನುವ ಅರಿವಿಲ್ಲದೇ ಗುತ್ತಿಗೆದಾರರು ಅನ್ಯ ಮಾರ್ಗವಿಲ್ಲದೇ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಿಧಿಸಿದ ದಂಡವನ್ನು ಆನ್‌ಲೈನ್ ಮೂಲಕವೇ ಪಾವತಿಸಿದ್ದರು.
ಸೂಕ್ತ ಹಣ ನನ್ನ ಕೈ ಸೇರಿಲ್ಲ:
ನಾನು ಗುತ್ತಿಗೆ ಪಡೆದಿದ್ದ ರಾಮದಾಸ್ ಅವರ ಜಮೀನಿನಲ್ಲಿ ಸಿಕ್ಕ ಕೃಷ್ಣಶಿಲೆಯಲ್ಲಿ ಶ್ರೀರಾಮನ ಮೂರ್ತಿ ಅರಳಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವುದು ಸಂತಸ ತಂದಿದೆ. ಆದರೆ ಕಲ್ಲು ತೆಗೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ವಿಧಿಸಿದ 80 ಸಾವಿರ ರೂ. ದಂಡವೂ ಸೇರಿದಂತೆ ಸಾಕಷ್ಟು ಹಣ ನನಗೆ ನಷ್ಟವಾಗಿ ಸಾಲ ಮಾಡಿಕೊಂಡಿದ್ದೇನೆ ಎಂದು ಗುತ್ತಿಗೆದಾರ ಶ್ರೀನಿವಾಸ್ ನಟರಾಜ್ ‘ವಿಜಯವಾಣಿ’ಯೊಂದಿಗೆ ತಮ್ಮ ಅಳಲು ತೋಡಿಕೊಂಡರು.
ಅಯೋಧ್ಯೆಯಲ್ಲಿ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ ಎನ್ನುವ ಯಾವ ಕಲ್ಪನೆಯೂ ನಮಗೆ ಇರಲಿಲ್ಲ. ಜಮೀನು ಸಮತಟ್ಟು ಮಾಡಲು ಕಲ್ಲು ಮೇಲೆತ್ತುವಾಗ ಕೃಷ್ಣಶಿಲೆ ದೊರೆಯುತ್ತಿದ್ದವು. ಅವುಗಳನ್ನು ಕೆಲ ಶಿಲ್ಪಿಗಳು ಬಂದು ತೆಗೆದುಕೊಂಡು ಹೋಗುತ್ತಿದ್ದರು. 2023ರ ಫೆಬ್ರವರಿಯಲ್ಲಿ ಸುರೇಂದ್ರಚಾರ್ ವಿಶ್ವಕರ್ಮ ಅವರು ನನಗೆ ಕರೆ ಮಾಡಿ, ‘ಮೂರ್ತಿ ತಯಾರಿಸಲು ಕೃಷ್ಣಶಿಲೆ ಬೇಕು. ಚೆನ್ನೈನಿಂದಲೂ ಕೆಲವರು ಬರಲಿದ್ದಾರೆ’ ಎಂದು ತಿಳಿಸಿದ್ದರು. ಅದರಂತೆ ಬಂದ ಕೆಲವರು ‘ಜಮೀನಿನಲ್ಲಿ ಇದ್ದ ಕಲ್ಲುಗಳನ್ನು ನೋಡಿ, ಅಯೋಧ್ಯೆಗೆ ಕಳುಹಿಸಿಕೊಡಬೇಕು. ಆದರೆ ಈ ವಿಷಯವನ್ನು ಯಾರಿಗೂ ಹೇಳದೆ ಗೌಪ್ಯವಾಗಿ ಇಟ್ಟಿರಬೇಕು’ ಎಂಬುದಾಗಿ ಹೇಳಿದ್ದರು ಎಂದು ವಿವರಿಸಿದರು.
‘ಅದರಂತೆ ಬೆಂಗಳೂರಿನ ಗ್ರಾನೈಟ್ ವ್ಯಾಪಾರಸ್ಥರ ಮೂಲಕ ಅಯೋಧ್ಯೆಗೆ ಕಲ್ಲುಗಳನ್ನು ಕಳುಹಿಸಿಕೊಟ್ಟೆ. ಅಂತಿಮವಾಗಿ ನಾವು ಕಳುಹಿಸಿದ ಶಿಲೆ ರಾಮನ ಮೂರ್ತಿಯಾಗಿ ಅರಳಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗುತ್ತಿದೆ. ಈಗ ಮತ್ತೆ ಮೂರು ಶಿಲೆಗಳನ್ನು ಲಕ್ಷ್ಮಣ, ಭರತ ಹಾಗೂ ಶತ್ರುಜ್ಞ ಮೂರ್ತಿ ತಯಾರಿಸಲು ಸಹ ತೆಗೆದುಕೊಂಡು ಹೋಗಲಾಗಿದೆ. ಆದರೆ ನಾನು ಮೂರ್ತಿ ಮಾಡಲು ಕಲ್ಲು ಕಳುಹಿಸಿದ ಖರ್ಚು, ದಂಡದ ಮೊತ್ತ ಸೇರಿದಂತೆ ಹೆಚ್ಚಿನ ಹಣ ದೊರೆತಿಲ್ಲ. ಇದರಿಂದ ನಾನು ಸಾಲ ಮಾಡಿಕೊಂಡಿದ್ದೇನೆ. ಟ್ರಸ್ಟ್‌ನವರು ಈಗಲಾದರೂ ನನಗೆ ಆರ್ಥಿಕ ನೆರವು ನೆರವು ನೀಡಿದರೆ ಅನುಕೂಲವಾಗುತ್ತದೆ’ ಎಂದು ಕೋರಿಕೆ ಮುಂದಿಟ್ಟಿದ್ದಾರೆ.

ಮೂರ್ತಿ ಪ್ರತಿಷ್ಠಾಪನೆಗೆ ಅಹ್ವಾನವಿಲ್ಲ
ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ಶ್ರೀರಾಮಲಲ್ಲಾ ಮೂರ್ತಿ ಮೈದಳೆಯಲು ಶಿಲೆ ಸಿಕ್ಕ ಜಮೀನಿನ ಮಾಲೀಕ ರಾಮದಾಸ್ ಅವರಿಗೆ ಆಹ್ವಾನವಿಲ್ಲ.
ಇಡೀ ದೇಶವೇ ಸಂಭ್ರಮದಲ್ಲಿ ಭಾಗವಹಿಸುತ್ತಿರುವುದು ಸಂತೋಷವಾಗಿದೆ. ನಮ್ಮ ಜಮೀನಿನಲ್ಲಿ ದೊರೆತ ಶಿಲೆ ಮೂರ್ತಿಯಾಗಿ ಪೂಜಿಸಲಾಗುತ್ತದೆ ಎನ್ನುವುದು ಇನ್ನಷ್ಟು ಸಂತೋಷ ಹೆಚ್ಚಿಸಿದೆ. ಆದರೆ ಮೂರ್ತಿ ಪ್ರತಿಷ್ಠಾಪನೆಯನ್ನು ಕಣ್ಮುಂಬಿಕೊಳ್ಳಲು ಆಹ್ವಾನವಿಲ್ಲ ಎನ್ನುವ ಬೇಸರವಿದೆ. ಮುಂದೆ ಸಾಧ್ಯವಾದರೆ ಹೋಗಿ ರಾಮನ ದರ್ಶನ ಪಡೆಯುತ್ತೇನೆ ಎಂದು ಜಮೀನಿನ ಮಾಲೀಕ ರಾಮದಾಸ್ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net