ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಅಂಜನಾದ್ರಿ ಇಟ್ಟಿಗೆ, ಪಂಪಾ ಸರೋವರದ ಜಲ

Anjanadri Hill Pampasarovara
Published on

ಕೊಪ್ಪಳ: ಅಯೋಧ್ಯ ಶ್ರೀರಾಮ ಮಂದಿರ ನಿರ್ಮಾಣ ಶಿಲಾನ್ಯಾಸಕ್ಕೆ ಹನುಮನುದಿಸಿದ ನಾಡು ಅಂಜನಾದ್ರಿಯಿಂದ ಬೆಳ್ಳಿಲೇಪಿತ ಇಟ್ಟಿಗೆ, ಚಕ್ರತೀರ್ಥದ ಜಲ ಹಾಗೂ ಮಣ್ಣು ಕಳಿಸಲಾಗುವುದೆಂದು ಶ್ರೀರಾಮಸೇನೆಯ ರಾಜ್ಯ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆಗಸ್ಟ್ 5ರಂದು ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಅವರಿಂದ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯಲಿದೆ. ಈ ಕಾರ್ಯಕ್ಕೆ ಅಂಜನಾದ್ರಿ ಬೆಟ್ಟದ ಶಿಲೆ, ಚಕ್ರತೀರ್ಥದ ಜಲ ಹಾಗೂ ಮೃತ್ತಿಕೆ(ಮಣ್ಣು) ಕೊಂಡೊಯ್ಯಲಾಗುವುದು. ದೇಶದ ಮೂಲೆ, ಮೂಲೆಗಳಿಂದ ಪವಿತ್ರ ನದಿಗಳ ಜಲ, ಪವಿತ್ರ ಕ್ಷೇತ್ರಗಳ ಮೃತ್ತಿಕೆ ಹಾಗೂ ಶಿಲೆಗಳನ್ನು ಅಯೋಧ್ಯೆಗೆ ಕಳಿಸಲಾಗುತ್ತಿದೆ. ಅದರಂತೆ ರಾಮನ ಪರಮಭಕ್ತ ಹನುಮನ ಜನ್ಮ ಸ್ಥಾನ ಅಂಜನಾದ್ರಿ ಬೆಟ್ಟದಿಂದ 9 ಇಂಚು ಉದ್ದ, 6 ಇಂಚು ಅಗಲ ಹಾಗೂ 3 ಇಂಚು ದಪ್ಪದ ಶಿಲೆಗೆ ಬೆಳ್ಳಿಲೇಪ ಮಾಡಿ ಕಲಿಸಲಾಗುವುದು. ಜುಲೈ 29ರಂದು ಬೆಳಗ್ಗೆ 6 ಗಂಟೆಗೆ ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ಹೊಸಪೇಟೆಯಲ್ಲಿ ಕಾರ್ಯಕ್ರಮ ಮಾಡಲಾಗುವುದು. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಸೇರಿ ಕೇವಲ 30-40 ಪ್ರಮುಕರು ಭಾಗಿಯಾಗಲಿದ್ದಾರೆ. ಆರು ಜನ ಪ್ರಮುಖರು ಬೆಳ್ಳಿಲೇಪದ ಶಿಲೆ, ಮೃತ್ತಿಕೆ ಹಾಗೂ ಜಲವನ್ನು ಅಯೋಧ್ಯೆಗೆ ರೈಲಿನ ಮೂಲಕ ಕೊಂಡೊಯ್ಯಲಿದ್ದೇವೆ ಎಂದು ತಿಳಿಸಿದರು.

ಅಂಜನಾದ್ರಿ ಬೆಟ್ಟದಲ್ಲಿ ಧಾರ್ಮಿಕ ಭಾವನೆ ಹಾಗೂ ಪರಿಸರಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ ಕೆಲಸಗಳು ನಡೆಯಲಿ. ವಯೋವೃದ್ಧರು ಇಲ್ಲಿನ ಹನುಮನ ದರ್ಶನ ಪಡೆಯಲು ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು. ಹಾಗೆಯೇ ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಮಾರ್ಗವಾಗಬೇಕು. ಇದರಿಂದ ಇಲ್ಲಿನ ಪ್ರವಾಸೋದ್ಯಮವೂ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಶ್ರೀ ರಾಮಸೇನೆ ಹೋರಾಟಕ್ಕೂ ಸಿದ್ಧವಾಗಿದೆ ಎಂದರು. ಸಂಘಟನೆಯ ಧಾರವಾಡ ವಿಭಾಗೀಯ ಅಧ್ಯಕ್ಷ ರಾಜು ಖಾನಪ್ಪನವರ್, ಬಳ್ಳಾರಿ ಜಿಲ್ಲಾಧ್ಯಕ್ಷ ಸಂಜೀವ ಮರಡಿ ಇದ್ದರು.

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪಂಪಾ ಸರೋವರದ ಜಲ

ಗಂಗಾವತಿ ತಾಲೂಕಿನ ಆನೆಗೊಂದಿ ಭಾಗದ ಕಿಷ್ಕಿಂದಾ ಕ್ಷೇತ್ರದ ಮೃತ್ತಿಕೆ ಮತ್ತು ಪವಿತ್ರ ಜಲವನ್ನು ಆಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಶುಕ್ರವಾರ ಕಳುಹಿಸಿಕೊಡಲಾಯಿತು.

ಹಲವು ವರ್ಷಗಳಿಂದ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕರ ಸೇವಕರು ಕಾಯುತ್ತಿದ್ದು, ಆಗಸ್ಟ್ ಮೊದಲ ವಾರದಲ್ಲಿ ನೆರವೇರಿಸಲು ನಿರ್ಮಾಣ ಸಮಿತಿ ಸನ್ನದ್ಧವಾಗಿದೆ. ಪ್ರಧಾನ ಮಂತ್ರಿ ಸೇರಿ ಹಿಂದು ಪರ ಸಂಘಟನೆ ಪ್ರಮುಖರ ನೇತೃತ್ವದಲ್ಲಿ ನೆರವೇರಲಿದ್ದು, ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ. ಮಂದಿರ ನಿರ್ಮಾಣಕ್ಕಾ ತಾಲೂಕಿನ ಆನೆಗೊಂದಿ ಕಿಷ್ಕಿಂದಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಮೃತ್ತಿಕೆ (ಮಣ್ಣು) ಮತ್ತು ಜಲ (ನೀರು)ವನ್ನು ಕಳುಹಿಸಿಕೊಡಲು ಸ್ಥಳೀಯ ರಾಜಮನೆತನದವರು ಮತ್ತು ಭಜರಂಗ ದಳದವರು ನಿರ್ಧರಿಸಿದ್ದಾರೆ.ಹನುಮ ಜನಿಸಿದ ಪವಿತ್ರ ಸ್ಥಳ ಅಂಜನಾದ್ರಿ ಬೆಟ್ಟದಿಂದ ಮೃತ್ತಿಕೆ ಮತ್ತು ಪಂಪಾಸರೋವರದ ಜಲವನ್ನು ಸಂಗ್ರಹಿಸಲಾಗಿದೆ. ಶ್ರೀರಾಮ, ಆಂಜನೇಯ, ವಾಲಿ ಸುಗ್ರೀವ, ಶಬರಿ ಸೇರಿ ರಾಮಾಯಣದಲ್ಲಿ ಉಲ್ಲೇಖಿತ ಪ್ರಮುಖರು ಕಿಷ್ಕಿಂದ ಕ್ಷೇತ್ರದಲ್ಲಿ ನಡೆದಾಡಿದ್ದಾರೆ.ಹಲವು ಸಂಶೋಧನೆಯಲ್ಲೂ ರಾಮಾಯಣದ ಕುರುಹ ಕಂಡು ಬಂದ ಹಿನ್ನೆಲೆಯಲ್ಲಿ ಆಯೋಧ್ಯೆ ನ್ಯಾಸ ಕಮಿಟಿ ಸದಸ್ಯರು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದರು. ಭಜರಂಗ ದಳದ ಸದಸ್ಯರು ಮೃತ್ತಿಕೆ ಮತ್ತು ಜಲ ಕಳುಹಿಸಿಕೊಡುತ್ತಿರುವುದಕ್ಕೆ ಕಿಷ್ಕಿಂದಾ ಕ್ಷೇತ್ರ ಮತ್ತೊಮ್ಮೆ ಸುದ್ದಿಯಾಗುತ್ತಿದೆ.

ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದಲ್ಲಿ ತಾಲೂಕಿನ ಕಿಷ್ಕಿಂದಾ ಕ್ಷೇತ್ರದ ಪಾತ್ರ ಮುಖ್ಯವಾಗಿದ್ದು, ಇಲ್ಲಿನ ಮೃತ್ತಿಕೆ ಮತ್ತು ಜಲವನ್ನು ಕಳುಹಿಸಿಕೊಡಲಾಗುತ್ತಿದೆ. | ಪದ್ಮನಾಭ್‌ರಾಜ್, ಆನೆಗೊಂದಿ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net