

ಬಳ್ಳಾರಿ: ರಾಮಮಂದಿರ ನಿರ್ಮಾಣಕ್ಕೆ ನಗರದ ಸಿದ್ಧಾರ್ಥ ಕಾಲನಿ ನಿವಾಸಿ ಶೇಕ್ಷಾ ವಲಿ 51 ಸಾವಿರ ರೂ. ದೇಣಿಗೆ ನೀಡಿ ಗಮನ ಸೆಳೆದಿದ್ದಾರೆ. ರಿಯಲ್ ಎಸ್ಟೇಟ್ ವಲಯದಲ್ಲಿ ಕೆಲಸ ಮಾಡುವ ಶೇಕ್ಷಾವಲಿ, ನಾನು ಆಂಜನೇಯ ಸ್ವಾಮಿ ಭಕ್ತನಾಗಿದ್ದೇನೆ.
ಚಿಕ್ಕವನಿದ್ದಾಗಿನಿಂದ ನಗರದ ಬಾಲಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗುತ್ತೇನೆ. ಆಂಜನೇಯನ ಅನುಗ್ರಹದಿಂದ ಚೆನ್ನಾಗಿದ್ದೇನೆ. ಆಂಜನೇಯ ಶ್ರೀರಾಮನ ಪರಮ ಭಕ್ತ. ಇದರಿಂದಾಗಿ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿರುವೆ ಎಂದು ಪ್ರತಿಕ್ರಿಯಿಸಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್.ಮಲ್ಲನಗೌಡ, ಬಸವೇಶ್ವರ ನಗರದ ಸಂಗಮೇಶ್ವರ ದೇವಸ್ಥಾನದ ಕಾರ್ಯದರ್ಶಿ ಎರೆಣ್ಣ ಹಾಗೂ ಇತರರು ನಿಧಿ ಸಮರ್ಪಣಾ ಅಭಿಯಾನದ ಹಿನ್ನೆಲೆಯಲ್ಲಿ ಶೇಕ್ಷಾ ವಲಿಯನ್ನು ಭೇಟಿ ಮಾಡಿದಾಗ ನಿಧಿ ಸಮರ್ಪಿಸಿದ್ದಾರೆ.ಶೇಕ್ಷಾ ವಲಿ ಅವರ ಜಾತ್ಯತೀತ ಮನೋಭಾವ ಮೆಚ್ಚಬೇಕಾಗಿದೆ ಎಂದು ಸಂಗಮೇಶ್ವರ ದೇವಸ್ಥಾನದ ಕಾರ್ಯದರ್ಶಿ ಎರೆಣ್ಣ ತಿಳಿಸಿದರು.