

ರಾಯಚೂರು: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆ ಮತ್ತು ಶ್ರೀ ರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವ ಅಂಗವಾಗಿ ಜಿಲ್ಲೆಯಾದ್ಯಂತ ದೇವಸ್ಥಾನಗಳಲ್ಲಿ ಸೋಮವಾರ ವಿಶೇಷ ಹೋಮ, ಹವನ ಹಾಗೂ ರಾಮ ನಾಮ ಜಪ ನಡೆಸಲಾಯಿತು.
ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ನಡೆಸುವುದರ ಜತೆಗೆ ದೇವರಿಗೆ ವಿಶೇಷ ಪೂಜೆ ನಡೆಸಲಾಯಿತು. ಬಹಳಷ್ಟು ಸಂಘ ಸಂಸ್ಥೆಗಳಿಂದ ಅನ್ನ ಸಂತರ್ಪಣೆ, ಯುವಕರಿಂದ ಬೈಕ್ ರ‌್ಯಾಲಿ, ಮಹಿಳೆಯರಿಂದ ಕುಂಭ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ವೀರ ಸಾರ್ವಕತ್ ವೃತ್ತದಲ್ಲಿ ರಾಮ ಮಂದಿರದ ಪ್ರತಿಕೃತಿ ಪ್ರದರ್ಶನ, ಯಾದವ ಸಮಾಜದ ಶ್ರೀಕೃಷ್ಣ ದೇವಸ್ಥಾನದಲ್ಲಿ ಹೋಮ ಹಮ್ಮಿಕೊಳ್ಳಲಾಗಿತ್ತು. ಮಕ್ತಲಪೇಟೆಯ ವೀರಾಂಜಿನೇಯ ದೇವಸ್ಥಾನದಲ್ಲಿ ಪಲ್ಲಕ್ಕ ಉತ್ಸವ ಹಾಗೂ ಮಹಿಳೆಯರಿಂದ ಕುಂಭ ಮೆರವಣಿಗೆ ನಡೆಸಲಾಯಿತು.
ನಗರ ಮುಂಗ್ಲಿ ಪ್ರಾಣ ದೇವರ ದೇವಸ್ಥಾನದಲ್ಲಿ ಗಣಪತಿ, ಪುಣ್ಯಾಹವಾಚನ ಮತ್ತು ಶ್ರೀರಾಮ ತಾರಕ ಮಹಾಮಂತ್ರ ಹೋಮ ನಡೆಸಲಾಯಿತು. ಈ ಸಂದರ್ಭದಲ್ಲಿ ನಗರ ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ನಗರಸಭೆ ಮಾಜಿ ಅಧ್ಯಕ್ಷೆ ಲಲಿತಾ ಕಡಗೋಲ, ಮಾಜಿ ಸದಸ್ಯ ನರಸಪ್ಪ ಯಕ್ಲಾಸಪುರ, ಮುಖಂಡರಾದ ರವೀಂದ್ರ ಜಲ್ದಾರ್, ಆಂಜಿನೇಯ ಕಡಗೋಲ್, ಅರ್ಚಕರಾದ ನರಸಿಂಹಾಚಾರ್ ಗಬ್ಬೂರ ಉಪಸ್ಥಿತರಿದ್ದರು.