ಅಯೋಧ್ಯೆಯಲ್ಲಿ ನೀಲಮೇಘಶ್ಯಾಮ ರಾಮ

udp-11-ayodhya
Published on

ಉಡುಪಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದಲ್ಲಿ ನೀಲಿಮಿಶ್ರಿತ ಶ್ವೇತಶಿಲೆಯಲ್ಲಿ ಶಿಲ್ಪಶಾಸ್ತ್ರೋಕ್ತ ರೀತಿಯಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪಿಸಲು ಭಾನುವಾರ ಅಯೋಧ್ಯೆಯ ಪ್ರವಾಸಿ ಮಂದಿರದಲ್ಲಿ ನಡೆದ ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸಭೆಯಲ್ಲಿ ನಿರ್ಣಯಿಸಲಾಗಿದೆ. ವಿಗ್ರಹ ಕೆತ್ತನೆ ಕಾರ್ಯಕ್ಕೆ ಸುಮಾರು 10 ತಿಂಗಳು ಸಮಯ ಅಂದಾಜಿಸಲಾಗಿದ್ದು, ಶಿಲೆಯನ್ನು ಗುರುತಿಸಿ ಮುಂದಿನ ವರ್ಷ ಫೆಬ್ರವರಿಯಲ್ಲಿ ಕೆತ್ತನೆ ಕಾರ್ಯ ಪ್ರಾರಂಭಿಸಲು ನಿರ್ಣಯಕೈಗೊಳ್ಳಲಾಗಿದೆ.

ಕರ್ನಾಟಕದ ಭಕ್ತರಿಂದ ಸ್ವರ್ಣ ಶಿಖರ
ರಾಮಮಂದಿರದ ಪ್ರಧಾನ ಗರ್ಭಗುಡಿಯ ಶಿಖರಕ್ಕೆ ರಾಮಭಕ್ತ ಹನುಮನ ಪವಿತ್ರ ನೆಲವಾಗಿರುವ ಕರ್ನಾಟಕದಿಂದ ಸ್ವರ್ಣ ಶಿಖರವನ್ನು ಅರ್ಪಿಸಬೇಕೆನ್ನುವ ಭಕ್ತರ ಬೇಡಿಕೆಯನ್ನು ಟ್ರಸ್ಟ್ ಸದಸ್ಯ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಭೆಯಲ್ಲಿ ಮಂಡಿಸಿದರು. ಮಂದಿರದ ವಾಸ್ತು ವಿನ್ಯಾಸಕ್ಕೆ ಅನುಗುಣವಾಗಿ ಸ್ವರ್ಣ ಶಿಖರವನ್ನು ನಿರ್ಮಿಸಿ ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಹಂಪೆಯಿಂದ ಸ್ವರ್ಣ ಶಿಖರ ಯಾತ್ರೆ ಮೂಲಕ ಅಯೋಧ್ಯೆಗೆ ತಲುಪಿಸುವ ಇರಾದೆಯನ್ನು ಶ್ರೀಗಳು ವ್ಯಕ್ತಪಡಿಸಿದರು. ಮುಂದಿನ ವರ್ಷಾಂತ್ಯಕ್ಕೆ ರಾಮನ ಪ್ರತಿಷ್ಠಾ ಮಹೋತ್ಸವಕ್ಕೆ ದಿನಾಂಕ ನಿಗದಿ ಪಡಿಸಿದ ಬಳಿಕ ಭಕ್ತರನ್ನು ಆಹ್ವಾನಿಸುವ ಸಲುವಾಗಿ ಯಾತ್ರೆಯನ್ನು ಕೈಗೊಳ್ಳಬಹುದೆಂಬ ಅಭಿಪ್ರಾಯವನ್ನೂ ಶ್ರೀಗಳು ವ್ಯಕ್ತಪಡಿಸಿದರು.

ನಿರ್ಮಾಣವೆಚ್ಚ ಹೆಚ್ಚಳ
ಆರಂಭದಲ್ಲಿ ಮಂದಿರ ನಿರ್ಮಾಣಕ್ಕೆ ಸುಮಾರು 400 ಕೋಟಿ ವೆಚ್ಚ ತಗಲಬಹುದೆಂದು ಅಂದಾಜಿಸಲಾಗಿತ್ತು. ಅನೇಕ ಕಾರಣಗಳಿಂದ ನಿರ್ಮಾಣ ವೆಚ್ಚ 1,300 ಕೋಟಿ ರೂ. ತಗಲುವ ಸಾಧ್ಯತೆ ಇದೆ. ಆದರೆ ಮಂದಿರಕ್ಕಾಗಿ ದೇಶಾದ್ಯಂತ ಭಕ್ತರು ಭರಪೂರ ದೇಣಿಗೆ ನೀಡುತ್ತಿದ್ದು, ಪ್ರತೀ ತಿಂಗಳು ಸರಾಸರಿ ಸುಮಾರು 50 ಲಕ್ಷ ರೂ. ದೇಣಿಗೆ ಹರಿದುಬರುತ್ತಿದೆ. ಈ ತನಕದ ಸುಮಾರು 300 ಕೋಟಿ ಖರ್ಚು ತಗುಲಿದ್ದು, ಅಭಿಯಾನದಲ್ಲಿ ಸಂಗ್ರಹಿಸಿದ ದೇಣಿಗೆ ಬದಲು ಈಗ ಬರುತ್ತಿರುವ ಹೆಚ್ಚುವರಿ ಕಾಣಿಕೆಯಿಂದಲೇ ಈ ಮೊತ್ತವನ್ನು ನಿರ್ವಹಿಸಲಾಗಿದೆ ಎಂಬ ಮಾಹಿತಿ ಸಭೆಗೆ ನೀಡಲಾಯಿತು. ಮಂದಿರಕ್ಕೆ ಬೇಕಾಗುವ ಸಾಗುವಾನಿ ಮರವನ್ನು ಮಹಾರಾಷ್ಟ್ರದಿಂದ ತರಿಸಿಕೊಳ್ಳಲು ನಿರ್ಣಯಿಸಲಾಯಿತು. ಜೊತೆಗೆ ಖರ್ಚು-ವೆಚ್ಚಗಳ ವಿವರಗಳನ್ನು ಸಭೆಗೆ ಸಲ್ಲಿಸಿ, ಅನುಮೋದನೆ ಪಡೆಯಲಾಯಿತು.

ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್ ಜೀ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಚಂಪತ್ ರಾಯ್ , ಕೋಶಾಧಿಕಾರಿ ಗೋವಿಂದ ಗಿರಿ ಸ್ವಾಮೀಜಿ, ಅಯೋಧ್ಯೆ ಜಿಲ್ಲಾಧಿಕಾರಿ, ವಿಹಿಂಪ ಮುಖಂಡ ಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು. ಮತ್ತೋರ್ವ ವಿಶ್ವಸ್ಥ ಹಿರಿಯ ನ್ಯಾಯವಾದಿ ಪರಾಶರನ್ ಆನಲೈನ್ ಮೂಲಕ ಸಭೆಯಲ್ಲಿ ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net