

ಶಿವಮೊಗ್ಗ: ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ರಾಮಮಂದಿರ ಸ್ಫೋಟಿಸಲು ಪಿಎಫ್‌ಐ ಸಂಚು ರೂಪಿಸಿತ್ತು ಎಂಬುದು ಆಘಾತಕಾರಿ ಸಂಗತಿ. ಇಂತಹ ದೇಶದ್ರೋಹಿಗಳನ್ನು ಜೈಲಿಗೆ ಕಳಿಸಿದರೆ ಸಾಲದು, ಕಠಿಣ ಶಿಕ್ಷೆ ನೀಡಬೇಕೆಂದು ಶಾಸಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು ಪಿಎಫ್‌ಐ ಸಂಚನ್ನು ಖಂಡಿಸಬೇಕು. ಪಿಎಫ್‌ಐ ಅಲ್ಲ ರಾವಣ, ಜಿನ್ನಾ ವಂಶಸ್ಥರು ಬಂದರೂ ರಾಮ ಮಂದಿರವನ್ನು ಸ್ಫೋಟಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.
ಇಂತಹ ದುಷ್ಕೃತ್ಯಗಳಿಗೆ ಪ್ರಯತ್ನ ನಡೆಸುವವರಿಗೆ ಹೊಸ ರೂಪದ ಕಾನೂನು ತಂದು, ಭಯ ಹುಟ್ಟಿಸಬೇಕು. ತಕ್ಷಣವೇ ನೇಣಿಗೇರಿಸಬೇಕು. ಹಾಗೆಯೇ ಬಿಟ್ಟರೆ ದೇಶದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುತ್ತದೆ. ಕೇಂದ್ರ ಸರ್ಕಾರ ತುರ್ತಾಗಿ ಕಠಿಣ ಕಾನೂನು ಜಾರಿಗೆ ತರಬೇಕು. ತುರ್ತಾಗಿ ಲೋಕಸಭೆ ಅಧಿವೇಶನ ಕರೆದು ಚರ್ಚೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಿಂದು ಸಮಾಜದ ಬಹುದಿನದ ಕನಸು. ಬಾಬ್ರಿ ಮಸೀದಿ ಗುಲಾಮಗಿರಿ ಸಂಕೇತದಂತಿತ್ತು. ಅಯೋಧ್ಯೆ ರಾಮ ಹುಟ್ಟಿದ ಜಾಗ, ಹೀಗಾಗಿಯೇ ಸುಪ್ರೀಂಕೋರ್ಟ್ ಮಂದಿರ ನಿರ್ಮಾಣದ ಪರವಾಗಿ ತೀರ್ಪು ನೀಡಿದೆ. ಹೀಗಿರುವಾಗ ಅದನ್ನು ಸ್ಫೋಟಿಸಲು ಸಂಚು ರೂಪಿಸಿದ್ದು ಘೋರ ಅಪರಾಧವಾಗಿದೆ ಎಂದರು.