

ಮೈಸೂರು: ಅಯೋಧ್ಯೆಯಲ್ಲಿ ಇತ್ತೀಚೆಗೆ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಇದೀಗ ಅಯೋಧ್ಯೆಯಲ್ಲೂ ಸುತ್ತೂರು ಶಾಖಾ ಮಠ ನಿರ್ಮಿಸಲು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮುಂದಾಗಿದ್ದು, ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ತಿಳಿಸಿದರು.
ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಸೇವಾರ್ಥದ ‘ಪಾರ್ವತಮ್ಮ-ಶಾಮನೂರು ಶಿವಶಂಕರಪ್ಪ ಅತಿಥಿ ಗೃಹ’ ಉದ್ಘಾಟಿಸಿ ಮಾತನಾಡಿದರು.
ಸುತ್ತೂರಿನ ಎಲ್ಲ 24 ಮಠಾಧೀಶರನ್ನು ಸ್ಮರಣೆ ಮಾಡುತ್ತೇನೆ. ಲಿಂಗಾಯತ ಸಮುದಾಯಕ್ಕೆ ಅವರು ಕೊಡುಗೆ ನೀಡಿದ್ದು, ಅವರಿಗೆ ಪ್ರಣಾಮ ತಿಳಿಸುತ್ತೇನೆ. ಕರ್ನಾಟಕದ ಪುಣ್ಯಭೂಮಿಯಲ್ಲಿ ಬಸವಣ್ಣನವರು ಕೋಟ್ಯಂತರ ಜನರಿಗೆ ತಮ್ಮ ವಚನಗಳ ಮೂಲಕ, ಒಂದು ವರ್ಗಕ್ಕೆ ಮಾತ್ರವಲ್ಲದೆ ಎಲ್ಲರಿಗೂ ಭಕ್ತಿಯ ಪ್ರೇರಣೆ ನೀಡಿದ್ದಾರೆ. ಬಿಜೆಪಿಯು ಅವರ ಸೇವೆಯನ್ನು ಗುರುತಿಸುವ ಜತೆಗೆ ವಂದಿಸುತ್ತದೆ ಎಂದರು.
ಶ್ರೀ ಮಠದಲ್ಲಿ ನೂರಾರು ಸಂಸ್ಥೆ, ಸಾವಿರಾರು ಸಿಬ್ಬಂದಿ ಇದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅನುಕೂಲ ಪಡೆದಿದ್ದಾರೆ. ವಿಶೇಷವಾಗಿ ಅಂಗವಿಕಲರಿಗೂ ಪಾಲಿಟೆಕ್ನಿಕ್ ಸಂಸ್ಥೆ ಮಾಡಿದ್ದು, ಇಡೀ ದೇಶದಿಂದ ವಿದ್ಯಾರ್ಥಿಗಳು ಬಂದು ಕಲಿಯುತ್ತಿದ್ದಾರೆ. ಇದೊಂದು ಪುಣ್ಯದ ಕೆಲಸವಾಗಿದೆ ಎಂದು ಶ್ಲಾಘಿಸಿದರು.
ನಾನು ನಿನ್ನೆಯೇ ಈ ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ, ಪಾರ್ಲಿಮೆಂಟ್ ಅಧಿವೇಶನ ಮುಂದೂಡಿದ ಕಾರಣ ನಿನ್ನೆ ಬರಲು ಆಗಲಿಲ್ಲ. ಇಂದು ಅಹಮದಾಬಾದ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಅಹಮದಾಬಾದ್ ಕಾರ್ಯಕ್ರಮ ರದ್ದುಪಡಿಸಿ ಇಲ್ಲಿಗೆ ಬಂದೆ. ಈ ಬಗ್ಗೆ ಅಲ್ಲಿನ ಪತ್ರಕರ್ತರು ನನ್ನ ಪ್ರಶ್ನಿಸಿದರು. ನಾನು ಸುತ್ತೂರು ಶ್ರೀಗಳ ದರ್ಶನಕ್ಕೆ ಹೋಗುವುದಾಗಿ ಹೇಳಿ ಬಂದಿದ್ದೇನೆ ಎಂದರು.
ಜಾತ್ರಾ ಮಹೋತ್ಸವದಲ್ಲಿ ಆರು ದಿನಗಳಿಂದ ತೆಪ್ಪೋತ್ಸವ, ರಥೋತ್ಸವ, ಕುಸ್ತಿ, ಪ್ರಸಾದ, ಕೃಷಿ ಮೇಳ ಹೀಗೆ ಎಲ್ಲ ವರ್ಗದ ಜನರನ್ನು ಒಳಗೊಂಡಂತೆ ಕಾರ್ಯಕ್ರಮ ನಡೆಸಲಾಗಿದೆ. ಸುತ್ತೂರು ಶ್ರೀ ಮಠದ ಪ್ರತಿಯೊಂದು ಸೇವಾ ಕಾರ್ಯಗಳನ್ನು ಸಮಾಜ ಹತ್ತಿರದಿಂದ ಕಂಡಿದೆ. ಆ ಕಾರಣದಿಂದಾಗಿ ಬಿಜೆಪಿ ಸದಾ ನಿಮ್ಮೊಂದಿಗೆ ಇರಲಿದೆ. ನಿಮ್ಮ ಕೊಡುಗೆಯನ್ನು ಕಾರ್ಯಕರ್ತರು ಸದಾಕಾಲ ಸ್ಮರಿಸುತ್ತಾ ಜನರ ಮಧ್ಯೆ ಹೋಗುತ್ತೇವೆ. ಕೊನೆಯವರೆಗೂ ಈ ಸೇವೆಯನ್ನು ಕೊಂಡಾಡುತ್ತೇವೆ ಎಂದರು.