

ರಾವಂದೂರು: ಆಯಿತನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ವಕೀಲ ಕೆ.ಶಂಕರ್, ಉಪಾಧ್ಯಕ್ಷರಾಗಿ ಗುರು ಮಲ್ಲಪ್ಪ ಅವಿರೋಧ ಆಯ್ಕೆಯಾದರು.
ಸಂಘದ ಆವರಣದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂಬಂಧ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಎರಡೂ ಸ್ಥಾನಗಳಿಗೆ ಕೇವಲ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಕಾರಣ ಚುನಾವಣಾಧಿಕಾರಿಯಾಗಿದ್ದ ಹಿತೇಂದ್ರ ಅವರು ಅವಿರೋಧ ಆಯ್ಕೆ ಘೋಷಣೆ ಮಾಡಿದರು.ನಂತರ ಮಾತನಾಡಿದ ಅಧ್ಯಕ್ಷ ಶಂಕರ್, ರೈತನ ಮಗನಾಗಿರುವ ನಾನು ಕೃಷಿ ರಂಗದ ಸಮಸ್ಯೆ ತಿಳಿದಿದ್ದೇನೆ. ಸಂಘದಲ್ಲಿ ರೈತರ ಬೆನ್ನೆಲುಬಾಗಿ ನಿಂತು ಪ್ರಗತಿಗೆ ಸಹಕಾರ ನೀಡುತ್ತೇನೆ ಎಂದರು. ಸರ್ಕಾರದಿಂದ ಬರುವ ಸವಲತ್ತುಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಈಚೂರು ಲೋಕೇಶ್ ಮಾತನಾಡಿ, ಸಹಕಾರ ಸಂಘಗಳು ರೈತರಿಗೆ ಕಣ್ಣುಗಳಿದ್ದಂತೆ. ಸಹಕಾರ ಸಂಘಗಳಲ್ಲಿ ದೊರಕುವ ಸಾಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ರೈತರು ಆರ್ಥಿಕವಾಗಿ ಸದೃಢ ರಾಗಬೇಕು ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ನಿತಿನ್ ವೆಂಕಟೇಶ್ ಮಾತನಾಡಿ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಳೆ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ. ರೈತರು ಈ ಸೌಲಭ್ಯವನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಕೆಪಿಸಿಸಿ ಸದಸ್ಯ ಅನಿಲ್ ಕುಮಾರ, ಗ್ರಾಪಂ ಅಧ್ಯಕ್ಷ ಸೀಗೂರು ವಿಜಯಕುಮಾರ್, ಮಾಜಿ ಅಧ್ಯಕ್ಷರಾದ ಕಾಮರಾಜ್, ಶಿವಶಂಕರ್, ರಾಜಶೇಖರ್, ತಾಲೂಕು ಕೆಡಿಪಿ ಸದಸ್ಯ ಆಯಿತನಹಳ್ಳಿ ಮಹಾದೇವ, ಸಹಕಾರ ಸಂಘದ ನಿರ್ದೇಶಕರಾದ ಈಚೂರು ದಿನೇಶ್, ನಾಗೇಗೌಡ, ಸಣ್ಣ ಕಾಳಯ್ಯ, ಮಂಜುನಾಥ, ಲತಾ ಮಹೇಶ್, ತಾಪಂ ಮಾಜಿ ಸದಸ್ಯ ಅಣ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು.