ಎಡೆಹಳ್ಳಿ: ಅಯ್ಯಪ್ಪಸ್ವಾಮಿ ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನ

2ss1homakarya
Published on

ಶನಿವಾರಸಂತೆ : ಸಮೀಪದ ಎಡೆಹಳ್ಳಿ ಗ್ರಾಮದ ಶ್ರೀ ಅಯ್ಯಪ್ಪ ಸ್ವಾಮಿ ದೇವರ ವಾರ್ಷಿಕ ಪೂಜಾ ಮಹೋತ್ಸವ ಭಾನುವಾರ ಸಂಪನ್ನಗೊಂಡಿತು. ಶನಿವಾರ ರಾತ್ರಿ ಶ್ರೀ ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆ ಮತ್ತು ಹೋಮ ನೆರವೇರಿಸುವ ಮೂಲಕ ವಾರ್ಷಿಕ ಪೂಜಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಭಾನುವಾರ ಮುಂಜಾನೆ ಗ್ರಾಮದ ಸುಮಂಗಲೆಯರು ವಾದ್ಯಗೋಷ್ಠಿಯೊಂದಿಗೆ ಕಾಜೂರು ಹೊಳೆಗೆ ತೆರಳಿ ಗಂಗಾ ಪೂಜೆ ಸಲ್ಲಿಸಿ ಪೂರ್ಣ ಕುಂಭ ಕಳಸದೊಂದಿಗೆ ಗಂಗಾ ಜಲವನ್ನು ದೇವಸ್ಥಾನಕ್ಕೆ ತಂದರು. ನಂತರ ಶ್ರೀ ಅಯ್ಯಪ್ಪ ಸ್ವಾಮಿಯ ವಿಶೇಷ ಹೂವಿನ ಅಲಂಕಾರದೊಂದಿಗೆ ಮಂಟಪವನ್ನು ರಚಿಸಲಾಯಿತು ನಂತರ ಶ್ರೀ ಅಯ್ಯಪ್ಪ ಸ್ವಾಮಿಗೆ ಪಂಚಾಮೃತ ಅಭಿಷೇಕ ಮುಂತಾದ ಪೂಜೆ ಕೈಂಕರ್ಯವನ್ನು ನೆರವೇರಿಸಲಾಯಿತು. ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ ಭಕ್ತರಿಗೆ ಪ್ರಸಾದ ವಿನಿಯೋಗದೊಂದಿಗೆ ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನಗೊಂಡಿತು. ಶನಿವಾರಸಂತೆ ಶ್ರೀ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಮಾಲತೇಶ್ ನೇತೃತ್ವದಲ್ಲಿ ಅರ್ಚಕರು ಪೂಜೆ ಕೈಂಕರ್ಯ ನೆರವೇರಿಸಿದರು. ವಾರ್ಷಿಕ ಪೂಜೆ ಮಹೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ದೇವಸ್ಥಾನ ಸಮಿತಿ ವತಿಯಿಂದ ಮಧ್ಯಾಹ್ನ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net