ಮೇಲ್ಮನೆ ಶಕ್ತಿ ಪ್ರದರ್ಶನಕ್ಕೆ ಆಯನೂರು ಗೆಲುವು ಮುಖ್ಯ: ಮಧು ಬಂಗಾರಪ್ಪ

congress meeting
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು. ಕಿಮ್ಮನೆ ರತ್ನಾಕರ, ಆಯನೂರು ಮಂಜುನಾಥ, ಕೆ.ಕೆ.ಮಂಜುನಾಥಕುಮಾರ್, ಆರ್.ಎಂ.ಮಂಜುನಾಥ ಗೌಡ, ಎಸ್.ರವಿಕುಮಾರ್ ಇತರರಿದ್ದರು.
Published on

ಶಿವಮೊಗ್ಗ: ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ ಅವರ ಗೆಲುವು ಪಕ್ಷದ ಗೆಲುವು. ಆದ್ದರಿಂದ ಇರುವ ಕಾಲಾವಕಾಶದಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರು ಹೆಚ್ಚು ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನೈಋತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಲೋಕಸಭಾ ಚುನಾವಣೆ ಕಾರ್ಯದಲ್ಲಿ ಎಲ್ಲ ಕಾರ್ಯರ್ತರು ಶಕ್ತಿ ಮೀರಿ ಶ್ರಮಿಸಿದ್ದಾರೆ. ಗೀತಾ ಶಿವರಾಜ್‌ಕುಮಾರ್ ಅವರ ಗೆಲುವಿಗೆ ಎಲ್ಲ ರೀತಿಯ ಸಕಾರಾತ್ಮಕ ವಾತಾವರಣ ನಿರ್ಮಾಣವಾಗಿದೆ. ಅದೇ ರೀತಿ, ನೈಋತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿಯೂ ಶಕ್ತಿ ಪ್ರದರ್ಶನ ಮಾಡಬೇಕಿದೆ ಎಂದರು.
ಆಯನೂರು ಮಂಜುನಾಥ ಅವರನ್ನು ಮೇಲ್ಮನೆಗೆ ಕಳುಹಿಸಿಕೊಡುವ ಕಾರ್ಯ ಖಂಡಿತ ಆಗಬೇಕಿದೆ. ಬಿಜೆಪಿಗರಿಗೆ ಜೆಡಿಎಸ್ ಮೈತ್ರಿಯೊಂದಿಗೆ ಕೈ ಜೋಡಿಸಿದ ಬಳಿಕ ಬುದ್ಧಿ ಸ್ಥಿಮಿತ ಕಳೆದುಕೊಂಡಿದೆ. ಆದ್ದರಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆಸಲು ಮುಂದಾದರೂ ಅಡ್ಡಗಾಲು ಹಾಕಲು ಆರಂಭಿಸಿದ್ದಾರೆ. ಹಾಗಾಗಿ ಮೇಲ್ಮನೆಯಲ್ಲಿ ಅತ್ಯಂತ ಪ್ರಬಲ ನಾಯಕರ ಅವಶ್ಯಕತೆ ಇದ್ದು ಆಯನೂರು ಮಂಜುನಾಥ ಅವರನ್ನು ಬೆಂಬಲಿಸಬೇಕಿದೆ ಎಂದು ಹೇಳಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ಅತ್ಯಂತ ಪ್ರಾಮಾಣಿಕವಾಗಿ ನಡೆದಿದೆ. ಪ್ರತಿವರ್ಷಕ್ಕಿಂತ ಈ ಬಾರಿ 35 ಸಾವಿರಕ್ಕೂ ಹೆಚ್ಚು ಜನರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಕಾರಣ ಎಂದು ಕೂಡ ಹೇಳಬಹುದು ಎಂದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ಗೆಲುವಿನಿಂದ ಪಕ್ಷ ಸಂಘಟನೆಗೆ ಶಕ್ತಿ ಬರಲಿದೆ. ಆದ್ದರಿಂದ, ಇಲ್ಲಿ ಆಯನೂರು ಮಂಜುನಾಥ ಹಾಗೂ ಶಿಕ್ಷಕರ ಕ್ಷೇತ್ರದ ಮಂಜುನಾಥ ಕುಮಾರ್ ಅವರನ್ನು ಬೆಂಬಲಿಸಬೇಕು ಎಂದರು.
ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ ಮಾತನಾಡಿ, ಪದವೀಧರ ಚುನಾವಣೆಯು ಕ್ಷೇತ್ರದ ಪ್ರತಿಷ್ಠೆಯ ಪ್ರಶ್ನೆ. ಈಗಾಗಲೇ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರು ಗೆಲ್ಲುವ ಎಲ್ಲ ಲಕ್ಷಣ ಕಾಣುತ್ತಿದೆ. ಕ್ಷೇತ್ರದ ಜನರು ಖಂಡಿತ ಅವರ ಕೈ ಹಿಡಿಯಲಿದ್ದಾರೆ ಎಂದು ತಿಳಿಸಿದರು.
ನೈಋತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ ಕುಮಾರ್ ಮಾತನಾಡಿ, ಇದು ನನ್ನ ಮೂರನೇ ಚುನಾವಣೆ. ಶಿಕ್ಷಕನಾಗಿಯೂ ನಾನು ಸೇವೆ ಸಲ್ಲಿಸಿದ್ದೇನೆ. ಸಂಘಟನೆಗಳ ಮೂಲಕ ಜನಸೇವೆ ಮಾಡಿದ್ದೇನೆ. ಆದರೆ, ಹಿಂದಿನ ಚುನಾವಣೆಯಲ್ಲಿ ಪ್ರತಿಪಕ್ಷಗಳ ಪಿತೂರಿಯಿಂದ ಅತಿ ಕಡಿಮೆ ಮತಗಳಿಂದ ಸೋಲು ಕಾಣಬೇಕಾಯಿತು ಎಂದರು.
ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಭೋವಿ ನಿಗಮ ಅಧ್ಯಕ್ಷ ಎಸ್.ರವಿಕುಮಾರ್, ಮುಖಂಡರಾದ ಎನ್.ರಮೇಶ್, ಜಿ.ಡಿ.ಮಂಜುನಾಥ, ಸಿ.ಎಸ್.ಚಂದ್ರಭೂಪಾಲ್, ಧೀರರಾಜ ಹೊನ್ನವಿಲೆ, ಬಲ್ಕೀಷ್ ಬಾನು, ಅನಿತಾಕುಮಾರಿ, ವೈ.ಎಚ್.ನಾಗರಾಜ, ಹಿರಣ್ಣಯ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net