ಹೆದ್ದಾರಿ ಪಕ್ಕಕ್ಕೆ ನುಗ್ಗಿದ ಖಾಸಗಿ ಬಸ್, ತಪ್ಪಿದ ದೊಡ್ಡ ದುರಂತ !

26 ANR 1
Published on

ಶಿವಮೊಗ್ಗ: ಆಯನೂರು ಸಮೀಪ ಶುಕ್ರವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಹಿಂದಿಕ್ಕುವ ರಭಸದಲ್ಲಿ ಎದುರಿನಿಂದ ಮತ್ತೊಂದು ಬಸ್ ಬಂದಿದ್ದರಿಂದ ಚಾಲಕನ ನಿಯಂತ್ರಣದ ತಪ್ಪಿದ ಶಾಲಾ-ಕಾಲೇಜು ಮಕ್ಕಳಿದ್ದ ಖಾಸಗಿ ಬಸ್ ಹೆದ್ದಾರಿ ಪಕ್ಕಕ್ಕೆ ನುಗ್ಗಿದ್ದು ಸರಣಿ ಅಪಘಾತವಾದರೂ ದೊಡ್ಡ ದುರಂತ ತಪ್ಪಿದೆ. ಅಪಘಾತದಲ್ಲಿ ಮೂವರು ಕಾಲೇಜು ವಿದ್ಯಾರ್ಥಿನಿಯರು ಸೇರಿ ನಾಲ್ವರು ಗಾಯಗೊಂಡಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾನೇನಹಳ್ಳಿಯ ಶಿಲ್ಪಾ(33), ಎನ್‌ಎನ್‌ಸಿ ಕಾಲೇಜು ವಿದ್ಯಾರ್ಥಿಗಳಾದ ಕೀರ್ತಿ(21), ಭೂಮಿಕಾ(19), ಕಾವ್ಯಾ (21) ಗಾಯಗೊಂಡವರು. ಬೆಳಗ್ಗೆ ಬಾಳೇಕೊಪ್ಪದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಇದೇ ವೇಳೆ ಶಿವಮೊಗ್ಗದಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಮತ್ತು ಕಾರಿನ ನಡುವೆ ಅಪಘಾತವಾಗಿದೆ.

ಬಸ್‌ನ ಮುಂಭಾಗದ ಗಾಜು ಪುಡಿಯಾಗಿದ್ದು ಜಖಂಗೊಂಡಿದೆ. ಬಸ್‌ನಲ್ಲಿ 40ಕ್ಕೂ ಅಧಿಕ ಪ್ರಯಾಣಿಕರಿದ್ದರು. ಹೆದ್ದಾರಿಯಿಂದ ಸ್ವಲ್ಪ ಎಡಕ್ಕೆ ನುಗ್ಗಿದ್ದರೂ ಬೃಹತ್ ಮರಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಮರದ ಪಕ್ಕದಲ್ಲೇ ಬಸ್ ಹೋಗಿದ್ದರಿಂದ ಭಾರೀ ಅನಾಹುತ ತಪ್ಪಿತು ಎಂದು ಬಸ್‌ನಲ್ಲಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಬಾಳೇಕೊಪ್ಪ, ಚಾಮೇನಹಳ್ಳಿ, ಹಾರನಹಳ್ಳಿ, ಆಯನೂರು ಸುತ್ತಮುತ್ತ ಭಾಗದ ವಿದ್ಯಾರ್ಥಿಗಳು ಶಿವಮೊಗ್ಗದ ವಿವಿಧ ಶಾಲಾ-ಕಾಲೇಜುಗಳಿಗೆ ಪ್ರತಿದಿನ ಪ್ರಯಾಣಿಸುತ್ತಾರೆ. ಘಟನೆಗೆ ಚಾಲಕನ ಅಜಾಗರೂಕತೆಯೇ ಕಾರಣ ಎನ್ನಲಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net