

ಹುಬ್ಬಳ್ಳಿ: ಶಾಸಕರನ್ನು ಖರೀದಿ ವಸ್ತುಗಳನ್ನಾಗಿಸುವ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ. ಅಲ್ಲದೇ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸಿ, ಅಭಿವೃದ್ಧಿ ಕೆಲಸಗಳಿಗೆ ಕೊಡಲಿ ಪೆಟ್ಟು ಹಾಕಬೇಕು ಅನ್ನೋದಾ? ಯಾವ ಪುರುಷಾರ್ಥಕ್ಕೆ, ನಿಮ್ಮ ಉದ್ದೇಶವೇನು? ಎಂದು ಸಚಿವ ಎಚ್.ಕೆ. ಪಾಟೀಲ, ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರಶ್ನೆ ಮಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಒಂದು ರೀತಿಯಲ್ಲಿ ಷಡ್ಯಂತ್ರ. ಜನರಿಗೆ ಕೆಲಸ ಆಗಬೇಕು. ಅಭಿವೃದ್ಧಿ ಕಡೆ ಗಮನ ಹರಿಸಬೇಕು. ಇದನ್ನು ಬಿಟ್ಟು ಮಾಧ್ಯಮಗಳ ಮೂಲಕ ಜನರ ಮನಸ್ಸು ಅಭದ್ರಗೊಳಿಸುವ ಪ್ರಯತ್ನ ಯಶಸ್ವಿ ಆಗುವುದಿಲ್ಲ ಎಂದು ತಿರುಗೇಟು ನೀಡಿದರು.
ಜನರಿಗೆ ನಿಮ್ಮ ಬಗ್ಗೆ ಎಲ್ಲ ತಿಳಿಯುತ್ತಿದೆ. ಶಾಸಕರ ಖರೀದಿ ವಾತಾವರಣಕ್ಕೆ ಯಾರೂ ಬಲಿ ಆಗುವುದಿಲ್ಲ. ಈ ಮೊದಲು 17 ಶಾಸಕರನ್ನು ಮುಂಬೈ, ಗೋವಾಕ್ಕೆ ಕರೆದೊಯ್ದು ಖರೀದಿ ಮಾಡಿದ್ದರು. ನಂತರ ಜನರು ಯಾವ ರೀತಿ ಉತ್ತರಿಸಿದರು ಎಂಬುದನ್ನು ನೋಡಿಯಾಗಿದೆ. ಇಷ್ಟಾದ ಮೇಲೂ ಮತ್ತೆ ಹಾಗೆಯೇ ಆಗುತ್ತದೆ ಎಂದು ಯಾರಾದರೂ ತಿಳಿದಿದ್ದರೆ ಅದು ಭ್ರಮೆ ಎಂದು ಮೂದಲಿಸಿದರು.
ಭ್ರಷ್ಟಾಚಾರ ಸರ್ಕಾರ ಎಂದರೆ ನಿಮ್ಮ ಸೆಂಟ್ರಲ್ ವಿಜಿಲೆನ್ಸ್ ಏನು ಮಾಡುತ್ತಿದೆ. ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆ ಇಟ್ಕೊಂಡು ದಾಳಿ ಮಾಡಿದ್ದೀರಲ್ಲ. ತಾವು ಏನಿದ್ದಾರೆ? ಏನು ಹೇಳುತ್ತಿದ್ದಾರೆ ? ಎಂಬುದರ ಬಗ್ಗೆ ಕೇಂದ್ರ ಸಚಿವ ಜೋಶಿ ಅವರಿಗೆ ಅರಿವಿರಬೇಕು. ಸರ್ಕಾರದಲ್ಲಿ ಇರುವವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಈಗ 10 ವರ್ಷ ಆಯ್ತು. ಯಾರು ನಿಮಗೆ ತಡೆದಿದ್ದು? ಎಂದು ಸಚಿವ ಎಚ್.ಕೆ. ಪಾಟೀಲ, ಜೋಶಿಗೆ ಪ್ರಶ್ನೆ ಎಸೆದರು.
ಮಹಾರಾಷ್ಟ್ರದಲ್ಲಿ ನೀವು ಭ್ರಷ್ಟಾಚಾರದ ಮೂಲಕ ಸರ್ಕಾರ ಬದಲಾಯಿಸಿ ಯಶಸ್ವಿ ಆಗಿದ್ದೀರಿ. ಅದು ನಿಮ್ಮ ಪ್ರಾಮಾಣಿಕತೆ ಅಲ್ವೇ? ಎಂದು ಜೋಶಿ ಹೇಳಿಕೆಗೆ ಕುಟುಕಿದರು.