

ಬೆಂಗಳೂರು: ಹೈಗ್ರೌಂಡ್ಸ್ ಕ್ರೆಸ್ಸೆಂಟ್ ರಸ್ತೆಯ ಶ್ರೀ ಗುರುರಾಜ ಕಲ್ಯಾಣ ಮಂಟಪದಲ್ಲಿ ಶನಿವಾರ ಅಕ್ಷರಶಃ ಹಬ್ಬದ ಕಳೆ. ಮಕ್ಕಳಿಂದ ಹಿಡಿದು ಯುವಕರು, ಹಿರಿಯರೆಲ್ಲರ ಮೊಗದಲ್ಲಿ ಏನೋ ಒಂದು ಖುಷಿ, ದಾವಂತ ಮತ್ತು ಕುತೂಹಲ. ಆ ಕೌತುಕಕ್ಕೆ ಕಾರಣವಾಗಿದ್ದು, ‘ವಿಜಯಾನಂದ’ ಚಿತ್ರದ ಆಡಿಷನ್!
ಸಾರಿಗೆ, ಪತ್ರಿಕೋದ್ಯಮ ಸೇರಿ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ವಿಆರ್ಎಲ್ ಸಂಸ್ಥೆ, ವಿಆರ್ಎಲ್ ಫಿಲಂ ಪ್ರೊಡಕ್ಷನ್ಸ್ ಮೂಲಕ ಮೊದಲ ಸಲ ಚಿತ್ರನಿರ್ವಣಕ್ಕಿಳಿದಿರುವುದು ಗೊತ್ತಿರುವ ಸಂಗತಿ. ಚೊಚ್ಚಲ ಕಾಣಿಕೆಯಾಗಿ ಪದ್ಮಶ್ರೀ ಪುರಸ್ಕೃತ ಮತ್ತು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಜೀವನ ಆಧರಿತ ಬಯೋಪಿಕ್ ‘ವಿಜಯಾನಂದ’ ಸಿದ್ಧವಾಗುತ್ತಿದೆ. ಚಿತ್ರಕ್ಕೆ ಪ್ರತಿಭಾನ್ವಿತ ಕಲಾವಿದರ ಆಯ್ಕೆಯನ್ನೂ ಮಾಡಲಾಗುತ್ತಿದೆ. ಆ ಪ್ರಯುಕ್ತ ಶನಿವಾರ ಬೆಂಗಳೂರಿನಲ್ಲಿ ಮೆಗಾ ಆಡಿಷನ್ ನಡೆಸಲಾಯಿತು. ಹೈಗ್ರೌಂಡ್ಸ್ ಕ್ರೆಸ್ಸೆಂಟ್ ರಸ್ತೆಯಲ್ಲಿನ ಶ್ರೀ ಗುರುರಾಜ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಆಡಿಷನ್ನಲ್ಲಿ ಸಾವಿರಾರು ಕಲಾವಿದರು ಆಗಮಿಸಿ ಪ್ರತಿಭೆ ಪ್ರದರ್ಶಿಸಿದರು.
‘ವಿಜಯಾನಂದ’ ಚಿತ್ರದ ಕಲಾವಿದರ ಆಯ್ಕೆಯ ಆಡಿಷನ್ಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಬೆಳಗ್ಗೆ 10ರಿಂದ ಆರಂಭವಾದ ಆಡಿಷನ್ ಪ್ರಕ್ರಿಯೆ ಸಂಜೆ 6 ಗಂಟೆ ವರೆಗೂ ನಡೆಯಿತು. ಬರೋಬ್ಬರಿ 3ಸಾವಿರದಷ್ಟು ಅಭ್ಯರ್ಥಿಗಳು ಆಡಿಷನ್ ಎದುರಿಸಿದರು. ಕೇವಲ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಮಾತ್ರವಲ್ಲದೆ, ಸುತ್ತಲಿನ ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಹಾಸನ ಜಿಲ್ಲೆಗಳಿಂದಲೂ ನಟನಾ ಆಕಾಂಕ್ಷಿಗಳು ಆಗಮಿಸಿ ತಮ್ಮ ಅಭಿನಯ ಚಾತುರ್ಯವನ್ನು ಪ್ರದರ್ಶಿಸಿದರು.
‘ವಿಜಯಾನಂದ’ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಗಳ ಜತೆಗೆ ಮಕ್ಕಳ ಪಾತ್ರವೂ ಅಷ್ಟೇ ಪ್ರಮುಖವಾಗಿದೆ. ಹಾಗಾಗಿ ಆಡಿಷನ್ನಲ್ಲಿ ಕೇವಲ ವಯಸ್ಕರಷ್ಟೇ ಅಲ್ಲ ಮಕ್ಕಳ ಕಲರವವೂ ಜೋರಾಗಿತ್ತು. ಗುರುರಾಜ್ ಕಲ್ಯಾಣ ಮಂಟಪದ ಮುಖ್ಯ ಸಭಾಂಗಣದಲ್ಲಿ ಯುವಕರು, ವಯಸ್ಕರರು ಮತ್ತು 70ರ ಆಸುಪಾಸಿನವರಿಗೆ ಅವಕಾಶ ನೀಡಿದರೆ, ಅದೇ ಕಟ್ಟಡದೊಳಗಿನ ಮತ್ತೊಂದು ಸಭಾಂಗಣದಲ್ಲಿ ನೂರಾರು ಪುಟಾಣಿಗಳು ನಟನೆ ಮೂಲಕವೇ ಗಮನ ಸೆಳೆದರು.
ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಮತ್ತು ‘ವಿಜಯಾನಂದ’ ಚಿತ್ರದ ನಿರ್ವಪಕರಾದ ಆನಂದ ಸಂಕೇಶ್ವರ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ, ಮಂಡಳಿಯ ಪದಾಧಿಕಾರಿಗಳ ಜತೆಗೆ ಉಭಯಕುಶಲೋಪರಿ ವಿಚಾರಿಸಿದರು. ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋವಿಂದು, ಉಪಾಧ್ಯಕ್ಷ ಉಮೇಶ್ ಬಣಕಾರ್, ನಿರ್ವಪಕ ಎನ್.ಎಮ್ ಸುರೇಶ್ ಆನಂದ ಸಂಕೇಶ್ವರ ಅವರನ್ನು ವಾಣಿಜ್ಯ ಮಂಡಳಿಗೆ ಮತ್ತು ಚಿತ್ರೋದ್ಯಮಕ್ಕೆ ಸ್ವಾಗತಿಸಿ, ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಸಾರಾ ಗೋವಿಂದು, ‘ಚಿತ್ರ ನಿರ್ಮಾಣ ಕ್ಷೇತ್ರಕ್ಕೆ ವಿಆರ್ಎಲ್ ಸಂಸ್ಥೆ ಅಡಿ ಇಟ್ಟಿರುವುದು ನಿಜಕ್ಕೂ ಖುಷಿಯ ವಿಚಾರ. ಈ ಸಂಸ್ಥೆಯಿಂದ ಮತ್ತಷ್ಟು, ಮಗದಷ್ಟು ಸಿನಿಮಾಗಳು ಬರಲಿ. ಕನ್ನಡ ಚಿತ್ರೋದ್ಯಮಕ್ಕೆ ಈ ಸಂಸ್ಥೆಯಿಂದ ಅಪಾರ ಕೊಡುಗೆ ಸಿಗಲಿ’ ಎಂದರು.
ಚಿತ್ರದ ನಾಯಕ ನಿಹಾಲ್ ಮತ್ತು ನಿರ್ದೇಶಕಿ ರಿಷಿಕಾ ಶರ್ಮ ಬೆಳಗ್ಗೆ 10ಕ್ಕೆ ಕ್ಯಾಮರಾಗಳಿಗೆ ಪೂಜೆ ಸಲ್ಲಿಸಿ ಆಡಿಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಡಿಷನ್ ಶುರುವಾಗುತ್ತಿದ್ದಂತೆ ಮಳೆರಾಯನೂ ಅದೇ ರೀತಿ ತನ್ನ ವರಸೆ ಆರಂಭಿಸಿದ್ದ. ಆದರೆ, ಮಳೆಯಿಂದ ಉತ್ಸಾಹ ಮಾತ್ರ ಕುಂದಲಿಲ್ಲ. ಮಳೆಯ ನಡುವೆಯೇ ಸಾಕಷ್ಟು ಆಕಾಂಕ್ಷಿಗಳು ಹಾಗೂ ಆಸಕ್ತರು ಸರದಿಯಲ್ಲಿ ಬಂದು ಕರೊನಾ ನಿಯಮಾವಳಿಗಳನ್ನು ಪಾಲಿಸಿ ನಟನೆಯನ್ನು ಪ್ರದರ್ಶಿಸಿದರು.
ಹುಬ್ಬಳ್ಳಿಯಲ್ಲಿನ ಆಡಿಷನ್ನಲ್ಲಿ ಭಾಗವಹಿಸಿದ ಮೂರೂವರೆ ಸಾವಿರ ಜನರ ಪೈಕಿ 60 ಮಂದಿಯ ಹೆಸರನ್ನು ಈಗಾಗಲೇ ಅಂತಿಮ ಮಾಡಿ, ಅವರಿಗೆ ಕರೆ ಮಾಡಿ ಶೂಟಿಂಗ್ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಅದೇ ರೀತಿ ಇದೀಗ ಬೆಂಗಳೂರಿನಲ್ಲಿ ನಡೆದ ಆಡಿಷನ್ ಫಲಿತಾಂಶ ಮುಂದಿನ ವಾರ ಹೊರಬೀಳಲಿದೆ.
| ಆನಂದ ಸಂಕೇಶ್ವರ ಎಂಡಿ, ವಿಆರ್ಎಲ್ ಸಮೂಹ ಸಂಸ್ಥೆಗಳು
| ರಿಷಿಕಾ ಶರ್ಮ ನಿರ್ದೇಶಕಿ
ವಿಆರ್ಎಲ್ ಫಿಲಂ ಪ್ರೊಡಕ್ಷನ್ಸ್ನ ಮಾಲೀಕರಾದ ಆನಂದ ಸಂಕೇಶ್ವರ ಅವರು ಶನಿವಾರ ನಡೆದ ಆಡಿಷನ್ ಸ್ಥಳಕ್ಕೆ ಭೇಟಿ ನೀಡಿ, ಆಗಮಿಸಿದ ಸಾವಿರಾರು ಕಲಾವಿದರೊಂದಿಗೆ ಬೆರೆತರು. ಯುವ ಕಲಾವಿದರ ವೇದಿಕೆ ಪ್ರದರ್ಶನಕ್ಕೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. ಇದೇ ವೇಳೆ ಕೆಲವರು ಅವರೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಅವರು, ‘ಲಾಜಿಸ್ಟಿಕ್ ಉದ್ಯಮ ಸವಾಲಿನ ಉದ್ಯಮ. ಈಗೆಲ್ಲ ಇಂಟರ್ನೆಟ್ ಕಾಲದಲ್ಲಿದ್ದೇವೆ. ಆಗ ಅದ್ಯಾವುದೂ ಇಲ್ಲದ ಹೊತ್ತಿನಲ್ಲಿ ಕೇವಲ ಒಂದು ಲಾರಿಯಿಂದ ಆರಂಭವಾದ ಈ ಪ್ರಯಾಣ ಇದೀಗ ಈ ಹಂತಕ್ಕೆ ಬಂದು ನಿಂತಿದೆ. ತಂದೆಯವರ ಈ ಸಾಧನೆ ಈಗಾಗಲೇ ಹಲವರಿಗೆ ಸ್ಪೂರ್ತಿಯಾಗಿದೆ. ಆ ಸ್ಪೂರ್ತಿಯ ಕಥೆ ಮತ್ತು ಸಾಧನೆಯ ಹಿಂದಿನ ಶ್ರಮವನ್ನು ಬಯೋಪಿಕ್ ಮೂಲಕ ತೆರೆಗೆ ತರಲು ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಹುಬ್ಬಳ್ಳಿಯಲ್ಲಿ ನಡೆದ ಆಡಿಷನ್ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಇಲ್ಲಿನ ಆಡಿಷನ್ಗೆ ಮಳೆಯನ್ನೂ ಲೆಕ್ಕಿಸದೆ ಆಗಮಿಸಿದ್ದೀರಿ. ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ನಟನಾಕಾಂಕ್ಷಿಗಳಿಗೆ ಅಭಿನಂದನೆ ತಿಳಿಸಿದರು.
ಚಿತ್ರೀಕರಣ ಪೂರ್ವ ಕೆಲಸಗಳನ್ನು ಮುಗಿಸಿಕೊಂಡಿರುವ ‘ವಿಜಯಾನಂದ’ ತಂಡ ಕಲಾವಿದರ ಆಯ್ಕೆಯ ಕೊನೇ ಹಂತದಲ್ಲಿದೆ. ಇದು ಮುಗಿಯುತ್ತಿದ್ದಂತೆ ಇದೇ 24ರಂದು ಹುಬ್ಬಳ್ಳಿಯಲ್ಲಿ ಚಿತ್ರದ ಅದ್ದೂರಿ ಮುಹೂರ್ತ ಸಮಾರಂಭ ನಡೆಯಲಿದೆ. ಅಲ್ಲಿಂದ ಮುಂದಿನ ಐದಾರು ತಿಂಗಳಲ್ಲಿ ಸಮರೋಪಾದಿಯಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ. ಹುಬ್ಬಳ್ಳಿ, ಹೈದರಾಬಾದ್ನ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ.
ಕಳೆದ ಎಂಟು ವರ್ಷಗಳಿಂದ ಸಿನಿಮಾ ರಂಗದಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ಮತ್ತು ‘ಟ್ರಂಕ್’ ಸಿನಿಮಾ ನಿರ್ದೇಶಿಸಿದ ರಿಶಿಕಾ ಶರ್ಮ ಈ ಬಯೋಪಿಕ್ನ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ‘ವಿಜಯಾನಂದ’ ಚಿತ್ರದಲ್ಲಿ ವಿಜಯ ಸಂಕೇಶ್ವರ ಅವರ ಪಾತ್ರಕ್ಕೆ ಉತ್ತರ ಕರ್ನಾಟಕದ ಪ್ರತಿಭೆ ನಿಹಾಲ್ ರಜಪೂತ್ ಬಣ್ಣಹಚ್ಚಲಿದ್ದಾರೆ. ರಿಶಿಕಾ ನಿರ್ದೇಶನದ ‘ಟ್ರಂಕ್’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಿಹಾಲ್, ಈ ಹಿಂದೆ ‘ಚೌಕ’ ಸಿನಿಮಾದಲ್ಲಿಯೂ ನಟಿಸಿದ್ದರು. ರಂಗಭೂಮಿಯಲ್ಲಿಯೂ ಪಳಗಿ ‘ಭಾರತಿ’, ‘ಗಂಗಾ’ ಧಾರಾವಾಹಿಗಳಲ್ಲಿಯೂ ನಟಿಸಿದ್ದರು.
ಮಲಯಾಳಂ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ತೆಲುಗಿನಲ್ಲಿ ಕೆಲಸ ಮಾಡಿದ ಅನುಭವ ಇರುವ ಗೋಪಿ ಸುಂದರ್ ಈ ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ. ‘ಕಡಲ ತೀರದ ಭಾರ್ಗವ’ ಮತ್ತು ‘ಮಹಿರಾ’ ಖ್ಯಾತಿಯ ಕೀರ್ತನ್ ಪೂಜಾರಿ ಛಾಯಾಗ್ರಹಣ, ಸಂಕಲನಕಾರರಾಗಿ ಹೇಮಂತ್ ಕುಮಾರ್ ಡಿ, ನೃತ್ಯ ನಿರ್ದೇಶಕ ಇರ್ವನ್ ಸರ್ದಾರಿಯಾ, ಕಲಾ ಎಕ್ಸಿಕ್ಯೂಷನ್ ವಸಂತ್ ಕುಲಕರ್ಣಿ, ರಘು ನಿಡುವಳ್ಳಿ ಸಂಭಾಷಣೆ ಜವಾಬ್ದಾರಿ ಹೊತ್ತಿದ್ದಾರೆ.
| ಸಮೀಕ್ಷಾ ಪೋಷಕರು
| ಪವನ್ ಡಿ ಆಡಿಷನ್ ಅಭ್ಯರ್ಥಿ
| ಚೈತ್ರಾ ಪೋಷಕರು