ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಸಹಕರಿಸಿ ; ಮಹಾನಗರ ಪಾಲಿಕೆ ಮೇಯರ್ ಫರೀದಾಬೇಗಂ ಮನವಿ

27TMk_Palike_Meeting
Published on

ತುಮಕೂರು :ಪ್ಲಾಸ್ಟಿಕ್ ಬಳಕೆ ಆರೋಗ್ಯಕ್ಕೆ ಹಾನಿಕರ ಎಂಬುದನ್ನು ಪ್ರತಿಯೊಬ್ಬರೂ ಅರಿತು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ತ್ಯಜಿಸಬೇಕು ಎಂದು ಮಹಾನಗರ ಪಾಲಿಕೆ ಮೇಯರ್ ಫರೀದಾಬೇಗಂ ಮನವಿ ಮಾಡಿದರು.

ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಕಲ್ಪ ಫೌಂಡೇಶನ್ ಮತ್ತು ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಹೋಟೆಲ್ ಆಹಾರ ವಿತರಣೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೂ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಹೋಟೆಲ್‌ನವರು, ಅಂಗಡಿಗಳ ವರ್ತಕರು ದಿನನಿತ್ಯ ವ್ಯಾಪಾರ ವಹಿವಾಟಿನಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ ಎಂದರು.

ನಿಷೇಧಿತ ಪ್ಲಾಸ್ಟಿಕ್ ಬಳಕೆ ವಿರುದ್ಧ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ದಂಡ ಹಾಕುತ್ತಿದ್ದರೂ ದಂಡ ಕಟ್ಟಿದ ತದ ನಂತರ ಮತ್ತೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಬಗ್ಗೆ ದೂರು ಬರುತ್ತಿವೆ. ಇದಕ್ಕೆ ಅವಕಾಶ ನೀಡದೆ ಹೋಟೆಲ್‌ನವರು, ವರ್ತಕರು ಸ್ವಯಂ ಪ್ರೇರಿತರಾಗಿಯೇ ನಿಷೇಧಿತ ಪ್ಲಾಸ್ಟಿಕ್ ಬಳಕೆ ಕೈಬಿಡಬೇಕು ಎಂದು ಸಲಹೆ ಮಾಡಿದರು. ನಾಗರಿಕರು ಸಹ ತಾವಾಗಿಯೇ ಈ ಬಗ್ಗೆ ಅರಿತು ಪ್ಲಾಸ್ಟಿಕ್ ತ್ಯಜಿಸಿದರೆ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಬಹುದು ಎಂದರು.

ಪಾಲಿಕೆ ಆಯುಕ್ತ ರೇಣುಕಾ ಮಾತನಾಡಿ, ಹೋಟೆಲ್ ಅಸೋಸಿಯೇಷನ್ ಮೂಲಕವೂ ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ, ಪಾಲಿಕೆ ಅಧಿಕಾರಿಗಳು ದಾಳಿ ಮಾಡಿ ದಂಡ ಹಾಕುವ ಹಂತಕ್ಕೆ ಪರಿಸ್ಥಿತಿಯನ್ನು ಹೋಟೆಲ್‌ಗಳವರು, ವರ್ತಕರು ತಂದುಕೊಳ್ಳಬಾರದು. ಸ್ವಯಂ ಪ್ರೇರಿತರಾಗಿಯೇ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಮುಂದಾಗಬೇಕು ಎಂದರು.

ಪಾಲಿಕೆ ಉಪಮೇಯರ್ ಶಶಿಕಲಾ, ಸಂಕಲ್ಪ ಪೌಂಡೇಷನ್‌ನ್ನ ಜಿ.ಎಸ್.ಮಂಜುನಾಥ್, ಡಾ.ನವೀನ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗೇಶ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net