

ಉಡುಪಿ: ಜೀವನ-ಸೀಮಿತಗೊಳಿಸುವ ಕಾಯಿಲೆಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ಗುಣಮಟ್ಟದ ಆರೈಕೆಯ ಅಗತ್ಯದ ಬಗ್ಗೆ ಜಾಗೃತಿ ಮೂಡಿಸುವುದು ಶ್ಲಾನೀಯ ಕಾರ್ಯ. ವಿಶ್ವಾದ್ಯಂತ ಉಪಶಾಮಕ ಆರೈಕೆ ಸೇವೆಗಳನ್ನು ಹೆಚ್ಚಿಸುವ ನೀತಿಗಳನ್ನು ಬೆಂಬಲಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಗೌರವಾನ್ವಿತ ಡಾ.ಕೆ.ವಿದ್ಯಾಕುಮಾರಿ ಹೇಳಿದರು.
ವಿಶ್ವ ಉಪಶಾಮಕ ದಿನ ಅಂಗವಾಗಿ ಕಸ್ತೂರ್ಬಾ ಆಸ್ಪತ್ರೆಯ ಉಪಶಾಮಕ ಔಷಧ ಮತ್ತು ಸಹಾಯಕ ಆರೈಕೆ ವಿಭಾಗ ಆಶ್ರಯದಲ್ಲಿ ಜಾಗೃತಿ ನಡಿಗೆ ಸಮಾರೋಪದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.
ಗೌರವ ಅಥಿತಿಯಾಗಿದ್ದ ನಾಡೋಜ ಡಾ.ಜಿ.ಶಂಕರ್ ಮಾತನಾಡಿ, ಮಾಹೆಯಿಂದ ಆರಂಭಿಸುತ್ತಿರುವ ಪಾಲಿಯೇಟಿವ್ ಕೇಂದ್ರದ ನಿಮಾರ್ಣಕ್ಕೆ ಗಣನೀಯ ದೇಣಿಗೆ ನೀಡಲಾಗುವುದು. ಕೇಂದ್ರದ ಕಾರ್ಯಾಚರಣೆಗಳಿಗೆ ಜನರು ಹೆಚ್ಚಿನ ಸಹಕಾರ ನೀಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನಗಳ ಸಹ ಕುಲಪತಿ ಡಾ. ಶರತ್ ರಾವ್, "ಪ್ರತಿಯೊಬ್ಬರಿಗೂ ಅರ್ಹವಾದ ಸಹಾನುಭೂತಿಯ ಆರೈಕೆಗೆ ಖಚಿತಪಡಿಸಿಕೊಳ್ಳುವುದು ಸಂಸ್ಥೆಯ ಗುರಿಯಾಗಿದೆ. ಮಾಹೆ ಮಣಿಪಾಲವು ಕರ್ನಾಟಕದ ಅತಿ ದೊಡ್ಡ ಪಾಲಿಯೇಟಿವ್ ಕೇಂದ್ರವನ್ನು ನಿರ್ಮಿಸುತ್ತಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ಎಂದರು.
ಬೋಧನಾ ಆಸ್ಪತ್ರೆ ಸಿ ಓ ಓ ಡಾ ಆನಂದ್ ವೇಣುಗೋಪಾಲ್ ಉಪಸ್ಥಿತರಿದ್ದರು. ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಸ್ವಾಗತಿಸಿ, ಸಹ ಡೀನ್ ಮತ್ತು ಉಪಶಾಮಕ ಔಷಧ ವಿಭಾಗದ ಮುಖ್ಯಸ್ಥ ಡಾ.ನವೀನ್ ಎಸ್.ಸಾಲಿನ್ಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಟಿ.ಎಂ.ಎ.ಪೈ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ.ಶಶಿಕಿರಣ್ ಉಮಾಕಾಂತ್ ವಂದಿಸಿದರು. ಉಪಶಾಮಕ ವೈದ್ಯಶಾಸ್ತ್ರ ಸಹ ಪ್ರಾಧ್ಯಾಪಕಿ ಡಾ.ಕೃತಿಕಾ ರಾವ್ ಕಾರ್ಯಕ್ರಮ ನಿರೂಪಿಸಿದರು.
ವಾಕಥಾನ್ಗೆ ಚಾಲನೆ
ಕಾರ್ಯಕ್ರಮಕ್ಕೂ ಮುನ್ನ ಬೋರ್ಡ್ ಹೈಸ್ಕೂಲ್ನಿಂದ ಕೆಎಂ ಮಾರ್ಗ, ಉಡುಪಿ ನ್ಯಾಯಾಲಯ ಮತ್ತು ಜೋಡುಕಟ್ಟೆ ವೃತ್ತದ ಮಾರ್ಗವಾಗಿ ಡಾ.ಟಿಎಂಎ ಪೈ ಆಸ್ಪತ್ರೆವರೆಗೆ ಜಾಥಾ ನಡೆಯಿತು. ಅದಾನಿ ಪವರ್ ಲಿಮಿಟೆಡ್ನ ಸ್ಟೇಷನ್ ಹೆಡ್ ಶ್ರೀಧರ್ ಗಣೇಶನ್ ಚಾಲನೆ ನೀಡಿದರು. ವೈದ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಉಪಶಾಮಕ ಆರೈಕೆ ರೋಗಿಗಳ ಕುಟುಂಬದವರು ಸೇರಿದಂತೆ 500 ಕ್ಕೂ ಹೆಚ್ಚು ಜನರು ಪಾಲ್ಗೊಂಡರು.