

ಮಡಿಕೇರಿ:
ಪ್ರತಿಯೊಬ್ಬರೂ ನಿಸರ್ಗದ ನಿಯಮಗಳನ್ನು ಪರಿಪಾಲಿಸುವ ಮೂಲಕ ಭವಿಷ್ಯದ ದೃಷ್ಟಿಯಿಂದ ಪರಿಸರ, ಪ್ರಕೃತಿ, ಅರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ಹೊಂದಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹೊಸಮನಿ ಪುಂಡಲೀಕ ಹೇಳಿದರು. ಕರ್ನಾಟಕ ಅರಣ್ಯ ಇಲಾಖೆಯ ಕೊಡಗು ಅರಣ್ಯ ವೃತ್ತ ಮತ್ತು ಮಡಿಕೇರಿ ವನ್ಯಜೀವಿ ವಿಭಾಗದ ವತಿಯಿಂದ ವಿವಿಧ ಶಾಲಾ- ಕಾಲೇಜು ಸಹಯೋಗದೊಂದಿಗೆ 70ನೇ ವನ್ಯಜೀವಿ ಸಪ್ತಾಹ-2024ರ ಅಂಗವಾಗಿ ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಗುರುವಾರ ಮಡಿಕೇರಿಯಲ್ಲಿ ವನ್ಯಜೀವಿಗಳೊಂದಿಗೆ ಸಹಬಾಳ್ವೆ ಎಂಬ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಿದ್ದ ವನ್ಯಜೀವಿ ಸಂರಕ್ಷಣೆಗಾಗಿ ಕಾಲ್ನಡಿಗೆ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.
ಜನರು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಿದಾಗ ಮಾತ್ರ ಪ್ರಕೃತಿ, ಪರಿಸರ ಉಳಿಯಲು ಸಾಧ್ಯ. ಇದರಿಂದ ಪರಿಸರ ಸಮತೋಲನ ಕಾಯ್ದುಕೊಳ್ಳಬಹುದು. ಅರಣ್ಯಕ್ಕೆ ನಾವು ಯಾವುದೇ ಹಾನಿ ಉಂಟು ಮಾಡದೇ ಸಸ್ಯ ಹಾಗೂ ಪ್ರಾಣಿ ಸಂಕುಲದ ಸಂರಕ್ಷಣೆ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿಯೊಂದು ಪ್ರಾಣಿ-ಪಕ್ಷಿಗಳು ಪರೋಕ್ಷವಾಗಿ ಮಾನವನಿಗೆ ಉಪಕಾರವನ್ನೇ ಮಾಡುತ್ತಾ ಬಂದಿವೆ. ಯಾವುದೇ ಪ್ರಾಣಿ-ಪಕ್ಷಿಗಳು ನಶಿಸದಂತೆ ಸಂರಕ್ಷಿಸಬೇಕು ಎಂದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಅರಣ್ಯ ಇಲಾಖೆಯ ವತಿಯಿಂದ ಹಮ್ಮಿಕೊಂಡಿರುವ ವನ್ಯಜೀವಿ ಸಪ್ತಾಹ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸುವ ಮೂಲಕ ಅರಣ್ಯ ಮತ್ತು ವನ್ಯಜೀವಿಗಳ ಉಳಿವಿಗೆ ನಿರಂತರ ಪ್ರಯತ್ನ ಅಗತ್ಯ. ಈ ಕಾಲ್ನಡಿಗೆ ಜಾಥಾ ಜನರಲ್ಲಿ ಅರಣ್ಯ, ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದರು.
ಕೊಡಗು ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ ಮಾತನಾಡಿ, ಪ್ರತಿಯೊಬ್ಬರೂ ಅರಣ್ಯ ಇಲಾಖೆಯ ಇಂಥÀ ಜನ ಜಾಗೃತಿ ಕಾರ್ಯಕ್ರಮಕ್ಕೆ
ಸಹಕರಿಸಬೇಕು ಎಂದರು.
ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್ ಮಾತನಾಡಿ ನಾವು ಅರಣ್ಯ ಮತ್ತು ವನ್ಯಜೀವಿಗಳ ಜೊತೆಯೇ ಬಾಳುವುದನ್ನು ಕಲಿಯಬೇಕು. ಆಗ ಮಾತ್ರ ಪ್ರಕೃತಿ ಮತ್ತು ಪರಿಸರ ಸಮತೋಲನದಿಂದ ಇರಲು ಸಾಧ್ಯ. ಉತ್ತಮ ಭವಿಷ್ಯಕ್ಕಾಗಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ನಾವು ಪಣತೊಡಬೇಕು ಎಂದರು.
ಮಡಿಕೇರಿ ವನ್ಯಜೀವಿ ವಿಭಾಗದ ಡಿಸಿಎಫ್ ಕೆ.ಎ. ನೆಹರು ವನ್ಯಜೀವಿ ಸಪ್ತಾಹ ಆಚರಣೆಯ ಉದ್ದೇಶ ತಿಳಿಸಿದರು. ಡಿಡಿಪಿಐ ಸಿ. ರಂಗಧಾಮಪ್ಪ, ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಸದಸ್ಯ ಎಂ.ಎನ್. ವೆಂಕಟನಾಯಕ್, ಜಿ.ಪಂ.ಸಿಇಓ ಆನಂದ್ ಪ್ರಕಾಶ್ ಮೀನಾ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಉಪ ವಿಭಾಗಾಧಿಕಾರಿ ವಿನಾಯಕ ನಾರ್ವಡೆ, ವಿರಾಜಪೇಟೆ ಪ್ರಾದೇಶಿಕ ವಿಭಾಗದ ಡಿಸಿಎಫ್, ಎನ್.ಎಚ್. ಜಗನ್ನಾಥ್, ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಸಂದೀಪ್ ಪಿ.ಅಭಯಂಕರ್ ಮತ್ತಿತರರು ಇದ್ದರು.
ವನ್ಯಜೀವಿ ಸಪ್ತಾಹ ಜಾಥಾ ಮಡಿಕೇರಿ ಅರಣ್ಯ ಭವನದಿಂದ ಆರಂಭಗೊAಡು ಮುಖ್ಯ ರಸ್ತೆಯ ಮೂಲಕ ಟೌನ್ ಹಾಲ್, ಚೌಕಿ ಹಾಗೂ ಮಹದೇವಪೇಟೆ ಮಾರ್ಗವಾಗಿ 4 ಕಿ.ಮೀ. ದೂರ ಕ್ರಮಿಸಿ ಸ್ವಾಗತ ಬೆಟ್ಟದ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್ನಲ್ಲಿ ಸಮಾಪನಗೊಂಡಿತು. ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆಗೆ ಸಂಬAಧಿಸಿದ ವಿವಿಧ ಘೋಷಣಾ ಫಲಕಗಳನ್ನು ಹಿಡಿದು ಜಾಥಾದಲ್ಲಿ ತೆರಳಿದ ವಿದ್ಯಾರ್ಥಿಗಳು ನಾಗರಿಕರಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸಿದರು.