

ಬೆಂಗಳೂರು: ವಿಶ್ವ ಆಹಾರ ಸುರಕ್ಷತಾ ದಿನ ನಿಮಿತ್ತ ಬಿಬಿಎಂಪಿ ಸಹಯೋಗದಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ, ಮಡಿವಾಳದ ಸರ್ಕಾರಿ ಮಾದರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಕಲಬೆರಕೆ ಆಹಾರ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.
ಶಾಲೆ ಮುಂಭಾಗದಿಂದ ಆರಂಭವಾದ ಜಾಥಾದಲ್ಲಿ ‘ಪೋಷಕಾಶ ಆಹಾರ ಸೇವಿಸಿ ಆರೋಗ್ಯದಿಂದ ಇರಿ’ ಮತ್ತು ಕಲಬೆರಕೆ ಆಹಾರ ದೇಹಕ್ಕೆ ಹಾನಿಕಾರ’ ಸೇರಿ ವಿವಿಧ ಫಲಕಗಳನ್ನು ಪ್ರದರ್ಶಿಸಲಾಯಿತು.
ಹಿರಿಯ ಆಹಾರ ಸುರಕ್ಷತಾಧಿಕಾರಿ ಎಲ್.ಶಿವಮೂರ್ತಿ ಮಾತನಾಡಿ,ಕಲಬೆರಕೆ ಆಹಾರ ಸೇವನೆಯಿಂದ ಮಧುಮೇಹ, ರಕ್ತದೊತ್ತಡ, ಬೊಜ್ಜು, ಹೃದಯಾಘಾತ, ಅಲರ್ಜಿ, ಚರ್ಮ ಸಮಸ್ಯೆ ಸೇರಿ ವಿವಿಧ ಗಂಭೀರ ಕಾಯಿಲೆಗಳು ಬರಲಿವೆ. ಹೋಟೆಲ್‌ಗಳು ಹಾಗೂ ರಸ್ತೆಬದಿಯಲ್ಲಿ ಮಾರಾಟ ಮಾಡುವವರು ಆಹಾರ, ಸಿಹಿ, ಖಾರ ತಿನಿಸು, ಕರಿದ ಪದಾರ್ಥಗಳಲ್ಲಿ ರುಚಿ ಹೆಚ್ಚಿಸಲು, ಬಣ್ಣದಿಂದ ಆಕರ್ಷಿಸಲು ಅಪಾಯಕಾರಿ ರಾಸಾಯನಿಕ ಅಂಶಗಳನ್ನು ಬಳಸಲಾಗುತ್ತಿದೆ. ಇಂತಹ ಆಹಾರಗಳನ್ನು ಸೇವಿಸಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಬಿಬಿಎಂಪಿ ದಕ್ಷಿಣ ವಲಯ ಅಂಕಿತಾಧಿಕಾರಿ ಡಾ.ಸುರೇಶ್ ಮಾತನಾಡಿ, ಆಕರ್ಷಣೆಯಾಗಿ ಕಾಣಲು ಕಬಾಬ್ ಸೇರಿ ಬಹುತೇಕ ಆಹಾರಗಳಲ್ಲಿ ಬಣ್ಣ ಮಿಶ್ರಣ ಮಾಡಲಾಗುತ್ತಿದೆ.ಆಹಾರ ರುಚಿ ಹೆಚ್ಚಿಸಲು ಟೇಸ್ಟಿಂಗ್ ಪೌಡರ್ ಹಾಕುತ್ತಿದ್ದಾರೆ. ಕೃತಕ ಬಣ್ಣ ಹಾಕಿರುವ ಕಾಟನ್ ಕ್ಯಾಂಡಿ, ಗೋಬಿ, ಕಬಾಬ್ ಸೇವನೆ ಮಾಡಬಾರದು. ಎಣ್ಣೆಯಿಂದ ತಯಾರಿಸಿದ ಪದಾರ್ಥಗಳ ಸೇವನೆಯಿಂದ ಬೊಜ್ಜು ಬರುತ್ತದೆ ಎಂದು ಎಚ್ಚರಿಕೆ ನೀಡಿದರು.
ಆಹಾರ ಸುರಕ್ಷತಾಧಿಕಾರಿಯಾದ ರಾಜೇಶ್, ರಮೇಶ್ ಕುಮಾರ್, ಶ್ರೀನಿವಾಸ್ ಸೇರಿ 400 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.