

ಬಾಗಲಕೋಟೆ: ಗ್ರಾಹಕರಿಗೆ ಮೋಸ ತಡೆಯುವುದು, ಶೋಷಣೆ ತಪ್ಪಿಸಲು ಹಾಗೂ ಗ್ರಾಹಕರ ಹಕ್ಕು ರಕ್ಷಣೆಯ ಹೋರಾಟದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಪ್ರಮುಖ ಪಾತ್ರ ವಹಿಸಿದೆ ಎಂದು ಕರ್ನಾಟಕ ಪ್ರಾಂತದ ಅಧ್ಯಕ್ಷ ಪ್ರೊ. ನರಸಿಂಹ ನಕ್ಷತ್ರಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1974ರಿಂದ ಗ್ರಾಹಕರ ಹಿತಕ್ಕಾಗಿ ಈ ಸಂಸ್ಥೆ ಕಾರ್ಯನಿರತವಾಗಿದ್ದು, ಯಾವುದೇ ಕಾನೂನು ರಕ್ಷಣೆಯಿಲ್ಲದ ಸಂದರ್ಭದಲ್ಲೂ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸಿತು. ಇದರ ಲವಾಗಿ 1986ರಲ್ಲಿ ಕೇಂದ್ರ ಸರ್ಕಾರ ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿತು. ಹೀಗಾಗಿ ಪ್ರತಿ ವರ್ಷ ಡಿಸೆಂಬರ್ 24 ರಂದು ರಾಷ್ಟ್ರೀಯ ಗ್ರಾಹಕರ ದಿನವಾಗಿ ಆಚರಿಸಲಾಗುತ್ತದೆ ಎಂದರು.
ಇಂದಿನ ಡಿಜಿಟಲ್ ಯುಗದಲ್ಲಿ ಹೊಸ ರೀತಿಯ ಮೋಸಗಳು, ಆನ್‌ಲೈನ್ ವಂಚನೆಗಳು ಮತ್ತು ಖೋಟಾ ಮಾರುಕಟ್ಟೆ ಚಟುವಟಿಕೆಗಳ ವಿರುದ್ಧ ಹೋರಾಡಲು 2020ರ ಗ್ರಾಹಕ ಕಾಯ್ಕೆ ಪರಿಣಾಮಕಾರಿಯಾಗಿದೆ. ರಾಜ್ಯಾದ್ಯಂತ ಜಾಗೃತಿ ಮತ್ತು ಶಿಕ್ಷಣ ಕಾರ್ಯಕ್ರಮಗಳ ಮೂಲಕ ಗ್ರಾಹಕರಿಗೆ ಅರಿವು ಮೂಡಿಸಲಾಗುತ್ತಿದೆ. ನಮ್ಮ ಒತ್ತಾಸೆಯಿಂದ ಕೇಂದ್ರ ಸರ್ಕಾರ ಆನ್‌ಲೈನ್ ಗೇಮಿಂಗ್‌ನ ದುಷ್ಪರಿಣಾಮಗಳನ್ನು ಗಮನಿಸಿ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಗ್ರಾಹಕ ಪಂಚಾಯತ್‌ನ ಗುರಿ ಕೇವಲ ದೂರು ಸ್ವೀಕರಿಸುವುದಲ್ಲ, ಜಾಗೃತಿ, ನುರಿತ ಮತ್ತು ಜವಾಬ್ದಾರಿಯುತ ಗ್ರಾಹಕರ ಸಂಘಟಿತ ಶಕ್ತಿ ನಿರ್ಮಾಣವೇ ನಮ್ಮ ಧ್ಯೇಯ. ಆಹಾರ, ಆರೋಗ್ಯ, ಶಿಕ್ಷಣ, ವಸತಿ, ಪರಿಸರ ಹಾಗೂ ವ್ಯವಹಾರ ಕ್ಷೇತ್ರಗಳಲ್ಲಿ ಗ್ರಾಹಕರ ಹಿತ ಕಾಯಲು ಸಂಘಟನೆ ಸತತವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಮಹಿಳಾ ಪ್ರಮುಖ ಡಾ. ಚಂದ್ರಿಕಾ ಕುರಂದವಾಡ ಮಾತನಾಡಿ, ಮಹಿಳೆಯರಿಗೆ ಪೌಷ್ಟಿಕ ಆಹಾರ ಹಾಗೂ ನೈಸರ್ಗಿಕ ಹೆರಿಗೆ ಕುರಿತು ಜಾಗೃತಿ ಮೂಡಿಸಲು ಡಿಸೆಂಬರ್‌ನಲ್ಲಿ ಬಾದಾಮಿ ಅಥವಾ ಬಾಗಲಕೋಟೆಯಲ್ಲಿ ಮಹಿಳಾ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಮಹಿಳೆಯರಲ್ಲಿ ಪೌಷ್ಠಿಕಾಂಶ ಕೊರತೆ ಹೆಚ್ಚಾಗಿ ಕಂಡುಬರುತ್ತಿದೆ. ನಗರ ಪ್ರದೇಶವಲ್ಲದೇ ಗ್ರಾಮೀಣ ಮಟ್ಟದಲ್ಲಿಯೂ ಹೆಚ್ಚು ಮಹಿಳೆಯರ ಹೆರಿಗೆ ಸಿಜೇರಿಯನ್ ಆಗುತ್ತಿದೆ. ಇದಕ್ಕೆ ಏನು ಕಾರಣ, ನೈಸರ್ಗಿಕ ಹೆರಿಗೆ ಕಡಿಮೆಯಾಗುತ್ತಿರುವ ಕುರಿತು ಅರಿವು ಮೂಡಿಸಲು ಸಮಾವೇಶದಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಂಗನಗೌಡ ದಂಡಣ್ಣವರ, ಪ್ರೊ. ಎ.ಬಿ. ಸಿದ್ಧನಗೌಡ, ಪ್ರೊ. ಮಹದೇವ ದೀಕ್ಷಿತ, ಪ್ರೊ. ಜಯತೀರ್ಥ ಕುಲ ಕರ್ಣಿ ಉಪಸ್ಥಿತರಿದ್ದರು.