

ಬೇಲೂರು: ಸಕಲೇಶಪುರದಲ್ಲಿ 2000ರಲ್ಲಿ ಪ್ರಾರಂಭವಾದ ಉಮೆನ್ಸ್ ಕಾಫಿ ಪ್ರಮೋಷನ್ಸ್ ಕೌನ್ಸಿಲ್ ಕಾಫಿ ಹಾಗೂ ಕಾಫಿ ಉತ್ಪನ್ನ ಬಳಕೆ ಪ್ರಮಾಣ ಹೆಚ್ಚಿಸಲು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಕೌನ್ಸಿಲ್‌ನ ಮಾಜಿ ಅಧ್ಯಕ್ಷೆ ಆಶಾ ಶಿವಪ್ರಸಾದ್ ಹೇಳಿದರು.
10ನೇ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಅಂಗವಾಗಿ ಪಟ್ಟಣದ ಶಾಂತಳಾ ಬಾಲಿಕಾ ಪ್ರೌಢಶಾಲೆ ಆವರಣ ಭಾನುವಾರ ಕಾಫಿ ಬೆಳೆಗಾರರ ಸಂಘ ಹಾಗೂ ಶಾಂತಳಾ ವಿದ್ಯಾ ಸಂಸ್ಥೆಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಬಂಧ, ಭಾಷಣ ಹಾಗೂ ಕ್ವಿಜ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಉಮೆನ್ಸ್ ಕಾಫಿ ಪ್ರಮೋಷನ್ಸ್ ಕೌನ್ಸಿಲ್‌ನಿಂದ ಕಾಫಿ 77 ಎಂಬ ತನ್ನದೇ ಆದ(ಚಿಕೋರಿ ಸಹಿತ ಮತ್ತು ಚಿಕೋರಿ ರಹಿತ) ಕಾಫಿ ಉತ್ಪನ್ನವನ್ನು ದೆಹಲಿ, ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಮಾರುಕಟ್ಟೆಗೆ ಬಿಟ್ಟಿದ್ದು, ಸ್ಟಾಲ್‌ಗಳ ಮೂಲಕ ಕಾಫಿ ತಯಾರಿಕಾ ವಿಧಾನವನ್ನು ತಿಳಿಸಿ ಕೊಟ್ಟಿದ್ದೇವೆ. ಜತೆಗೆ ಕಾಫಿಯಿಂದ ಚಾಕೋಲೆಟ್, ಬಿಸ್ಕೆಟ್, ಮೈಸೋಪು ಮತ್ತಿತರ ಪದಾರ್ಥಗಳನ್ನು ತಯಾರಿಸಲಾಗುತ್ತಿದೆ ಎಂದರು.
ಶಾಂತಳಾ ವಿದ್ಯಾಸಂಸ್ಥೆ ಕಾರ್ಯದರ್ಶಿ ತೋ.ಚ.ಅನಂತಸುಬ್ಬರಾಯ, ಕಾಫಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಸಲುವಾಗಿ ಕಾರ್ಯಕ್ರಮ ಆಯೋಜಿಸಿದ್ದೇವೆ. ನಮ್ಮ ವಿದ್ಯಾಸಂಸ್ಥೆಯೂ 1969ರಲ್ಲಿ ಪ್ರಾರಂಭವಾಗಿ ಇಲ್ಲಿವರೆಗೂ ಸಹಸ್ರಾರು ಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಸಾಮಾನ್ಯರಿಗೂ ಶಿಕ್ಷಣ ಕೈಗೆಟುಕುವಂತೆ ಮಾಡುವುದೇ ನಮ್ಮ ಉದ್ದೇಶ ಎಂದರು.
ಶಾಂತಳಾ ವಿದ್ಯಾಸಂಸ್ಥೆ ಅಧ್ಯಕ್ಷ ಭಗವಾನ್, ವುಮೆನ್ಸ್ ಕಾಫಿ ಪ್ರಮೋಷನ್ಸ್ ಕೌನ್ಸಿಲ್‌ನ ಅಧ್ಯಕ್ಷೆ ಸಾಗರಿಕಾ ಲಕ್ಷ್ಮಣ್, ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳಾದ ಲೋಹಿತ್, ಗಿರೀಶ್, ಅದ್ದೂರಿ ಕುಮಾರ್, ಡಾ.ಲೋಕೇಶ್, ವೆಂಕಟೇಶ್, ಸಂಜಯ್, ಬಿ.ಕೆ.ಚಂದ್ರಕಲಾ, ಪೂರ್ಣಿಮಾ, ಶ್ರುತಿ ರಂಜನ್, ಲಕ್ಷ್ಮೀ, ದಿವ್ಯಾ, ಶ್ರೀದೇವಿ, ನಂದಿತಾ, ಸಿದ್ದೇಗೌಡ ಇತರರು ಇದ್ದರು.