

ಯಾದಗಿರಿ: ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾದ ಭವನಗಳ ಬಗ್ಗೆ ಮಾಹಿತಿ ನೀಡದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಎಇಇ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲು ತೀಮರ್ಾನಿಸಲಾಗಿದೆ ಎಂದು ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ತಿಳಿಸಿದರು.
ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿ ಕರೆದಿದ್ದ ಉಪ ವಿಭಾಗ ಮಟ್ಟದ ಅನುಸೂಚಿತ ಜಾತಿ, ಪಂಗಡ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನೊಂದ ಜೀವಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಜಾಗೃತಿ ಮತ್ತು ಉಸ್ತುವಾರಿ ಸಮಿತಿಯು ಮಾಡುತ್ತದೆ. ಸಮಿತಿಯ ಎಲ್ಲ ಸದಸ್ಯರು ಕಡ್ಡಾಯವಾಗಿ ಸಭೆಗೆ ಹಾಜರಾಗಿ ಇಲ್ಲಿ ನಡೆಯುವ ಚರ್ಚೆ, ತೀರ್ಮಾನಗಳ ಅನುಸಾರ ಕಾರ್ಯ ನಿರ್ವಹಿಸಬೇಕು. ಬೇಜವಾಬ್ದಾರಿಯಿಂದ ವರ್ತಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಗೆ ಗೈರಾದ ಅಧಿಕಾರಿಗಳಿಗೆ 24 ಗಂಟೆಗಳಲ್ಲಿ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಲಾಗುವುದು. ಯಾದಗಿರಿ ಉಪ ವಿಭಾಗದಲ್ಲಿ 2019-20ನೇ ಸಾಲಿನಲ್ಲಿ ಇಲ್ಲಿಯವರೆಗೆ ಎಸ್ಸಿ, ಎಸ್ಟಿ ಕಾಯ್ದೆಯಡಿ 29 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಜಾತಿ ನಿಂದನೆ ಮತ್ತು ಇನ್ನಿತರ 21 ಪ್ರಕರಣಗಳಿಗೆ ವರ್ಷ ಕಳೆದರೂ ಪರಿಹಾರ ಧನ ಮಂಜೂರು ಮಾಡಿಲ್ಲ. ಖಜಾನೆಯಲ್ಲಿ ತೊಂದರೆ ಇದ್ದರೆ ಪರಿಹಾರಕ್ಕೆ ವರ್ಷ ಬೇಕಿಲ್ಲ. ತಕ್ಷಣ ಪರಿಹಾರ ಧನ ವಿತರಣೆಗೆ ಮತ್ತು ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ನಿರ್ದೇಶಿಸಿದರು.
ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು. ಸಮಾಜದಲ್ಲಿ ಗೌರವದಿಂದ ಬಾಳ್ವೆ ನಡೆಸಲು ಪ್ರತಿಯೊಬ್ಬರಿಗೂ ಹಕ್ಕಿದೆ. ಅಪರಾಧ ಮಾಡಿದಾಗ ಮಾತ್ರ ಸಂವಿಧಾನದ ಕಲಂಗಳು ನೆನಪಾಗಬಾರದು. ಈ ನಿಟ್ಟಿನಲ್ಲಿ ಯಾವ ಅಪರಾಧಗಳಿಗೆ ಯಾವ ಶಿಕ್ಷೆ ಎಂಬುದರ ಕುರಿತು ಸಮಾಜ ಕಲ್ಯಾಣ ಇಲಾಖೆಯು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಜಾಗೃತಿ ಮೂಡಿಸಬೇಕು. ಜಾತಿ ನಿಂದನೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು.
ಉಪ ವಿಭಾಗಮಟ್ಟದಲ್ಲಿ ಮಲ ಎತ್ತುವ ಮತ್ತು ಮಲದ ಗುಂಡಿಯಲ್ಲಿ ಮನುಷ್ಯರನ್ನು ಇಳಿಸಿ ಸ್ವಚ್ಛಗೊಳಿಸುವ ಪದ್ಧತಿ ಯಾವುದೇ ಕಾರಣಕ್ಕೂ ಇರಬಾರದು. ಇಂತಹ ಪ್ರಕರಣಗಳು ಕಂಡುಬಂದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಪೌರಕಾರ್ಮಿಕರಿಗೆ ಈ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಇನ್ನು ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆಗಳಲ್ಲಿ ಪೌರಕಾರ್ಮಿಕರಿಗೆ ಆರೋಗ್ಯ ಪರೀಕ್ಷೆ ಮಾಡಿಸುವಂತೆ ಸೂಚಿಸಿದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗಪ್ಪ ಪುಟಗಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡ ಜನಾಂಗದ ಕಾಲನಿಗಳಿಗೆ ಸರ್ಕಾರದಿಂದ ಮಂಜೂರಾದ ಸಿಸಿ ರಸ್ತೆ ಮತ್ತು ಚರಂಡಿಗಳನ್ನು ಸವರ್ಣಿಯರ ಕಾಲನಿಗಳಲ್ಲಿ ಮಾಡಲಾಗುತ್ತಿದೆ. ಹತ್ತಿಕುಣಿ ಗ್ರಾಮದ ಪರಿಶಿಷ್ಟ ಜಾತಿಯವರ ಕಾಲನಿಯಲ್ಲಿ ಚರಂಡಿ ನೀರು ತುಂಬಿ ಸಿಸಿ ರಸ್ತೆಯ ಮೇಲೆ ಹರಿಯುತ್ತಿದೆ. ಈ ಬಗ್ಗೆ ಕಳೆದ ಸಭೆಯಲ್ಲಿ ಗಮನ ಸೆಳೆದರೂ ಸ್ವಚ್ಛಗೊಳಿಸಿಲ್ಲ ಎಂದು ಆರೋಪಿಸಿದರು.
ಸಮಿತಿ ಸದಸ್ಯ ಸಾಯಬಣ್ಣ ತಳಕ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚನ್ನಬಸವ ಸಭೆಯಲ್ಲಿದ್ದರು.