ಮತದಾನ ನೋಂದಣಿಗಾಗಿ ಜಾಗೃತಿ ಜಾಥಾ

10
Published on

ಮೈಸೂರು: ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ನಗರ ಪಾಲಿಕೆ ಹಾಗೂ ರೋಟರಿ ಐವರಿ ಸಿಟಿ ಸಹಯೋಗದಲ್ಲಿ ಶುಕ್ರವಾರ ನಗರದಲ್ಲಿ ಮತದಾನ ನೋಂದಣಿ ಜಾಗೃತಿ ಜಾಥಾ ನಡೆಯಿತು.

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡ ಜಾಥಾವು ಚಿಕ್ಕಗಡಿಯಾರ ವೃತ್ತದವರೆಗೆ ನಡೆಯಿತು. ಜಾಥಾದಲ್ಲಿ ಭಾಗವಹಿಸಿದ್ದ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಜಾಥಾಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮತ್ತು ಜಿಪಂ ಸಿಇಒ ಕೆ.ಎಂ.ಗಾಯತ್ರಿ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಡಿಸೆಂಬರ್ 2 ಮತ್ತು 3 ರಂದು ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಆಯಾ ಬೂತ್ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದು, ತಪ್ಪದೇ ಸಾರ್ವಜನಿಕರು, ಯುವ ಮತದಾರರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ವೋಟರ್ ಹೆಲ್ಪ್ ಲೈನ್ ಆ್ಯಪ್ ಮೂಲಕವೇ ಯುವ ಮತದಾರರು ಅರ್ಜಿ ಸಲ್ಲಿಸಬಹುದು ಹಾಗೂ ಮತಗಟ್ಟೆಯ ಬಗ್ಗೆ ಮಾಹಿತಿ ಪಡೆಯಬಹುದು ಎಂದ ಅವರು, ಯುವಜನತೆ ಮತದಾನದಲ್ಲಿ ಹೆಚ್ಚು ಪಾಲ್ಗೊಳ್ಳಲು ಹಾಗೂ ಅವರ ಹಕ್ಕಿನ ಬಗ್ಗೆ ಪ್ರೇರೇಪಿಸಲು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಕೆ.ಎಂ.ಗಾಯತ್ರಿ ಮಾತನಾಡಿ, ನಗರ ಪ್ರದೇಶದಲ್ಲಿ ಮತದಾನದಲ್ಲಿ ಭಾಗವಹಿಸುವಿಕೆ ಕಡಿಮೆ ಇರುವ ಕಾರಣ, ಇಂತಹ ಕಾರ್ಯಕ್ರಮಗಳ ಮೂಲಕ ನೋಂದಣಿ ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಹೆಚ್ಚೆಚ್ಚು ಜನರು ಹಾಗೂ ಯುವ ಮತದಾರರು ಭಾಗವಹಿಸಬೇಕು. ಆ ಮೂಲಕ ಆರೋಗ್ಯಕರ ಮತದಾನ ಪಟ್ಟಿ ತಯಾರಿಕೆಗೆ ಅನುವಾಗುತ್ತದೆ ಎಂದು ತಿಳಿಸಿದರು.


ನಗರ ಪಾಲಿಕೆ ಉಪ ಆಯುಕ್ತ ಸೋಮಶೇಖರ್, ಉಪ ಕಾರ್ಯದರ್ಶಿ ಡಾ.ಎಂ.ಕೃಷ್ಣರಾಜು, ಯೋಗಪಟು ಖುಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net