ಸುರಕ್ಷತೆಗಳಿಗೆ ಆದ್ಯತೆ ನೀಡಿದರೆ ವಿದ್ಯುತ್ ಅವಘಡಕ್ಕೆ ಕಡಿವಾಣ

bescom
Awareness rally
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ವಿದ್ಯುತ್ ಅವಘಡಗಳು ಸಂಭವಿಸಿ ಅಮಾಯಕರು ಬಲಿಯಾಗುತ್ತಿದ್ದು, ಇದನ್ನು ತಡೆಯಲು ಸಾರ್ವಜನಿಕರು ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಬೆಸ್ಕಾಂ ಉಪ ವಿಭಾಗ ಕಾರ್ಯನಿರ್ವಾಹಕ ಅಭಿಯಂತ ಧನಂಜಯ್ ತಿಳಿಸಿದರು.
ನಗರದ ಪ್ರವಾಸಿ ಮಂದಿರ ಸಮೀಪ ಬೆಸ್ಕಾಂ ನೆಲಮಂಗಲ ಉಪ ವಿಭಾಗದದಿಂದ ವಿದ್ಯುತ್ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ, ಮಾತನಾಡಿದರು.
ಮನುಷ್ಯನ ಸುಗಮ ಜೀವನಕ್ಕೆ ವಿದ್ಯುತ್ ಬೇಕು. ಬದುಕಿನ ಪ್ರತಿ ಹಂತದಲ್ಲಿ ನಾವು ವಿದ್ಯುತ್ ಬಳಕೆ ಮಾಡುವ ಸಂದರ್ಭದಲ್ಲಿ ಪ್ರಾಣ ರಕ್ಷಣೆಗೆ ಪೂರಕವಾಗಿ ಸುರಕ್ಷತಾ ಕ್ರಮಗಳನ್ನು ಮುನ್ನೆಚ್ಚರಿಕೆಯಿಂದ ಕೈಗೊಳ್ಳಬೇಕು. ಬಹಳಷ್ಟು ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿ, ವಿದ್ಯುತ್ ಅವಘಡಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದರು.
ವಿದ್ಯುತ್ ಕಂಬ ಏರಿ ದುರಸ್ತಿ ಮಾಡುವುದು, ಲೈನ್‌ಗಳಿಗೆ ನೇರವಾಗಿ ವೈರನ್ನು ಹಾಕಿ ವಿದ್ಯುತ್ ಕಳ್ಳತನ ಮಾಡುವುದು, ವಿದ್ಯುತ್ ಕಂಬಗಳಿಗೆ ಕುರಿ, ಜಾನುವಾರಗಳನ್ನು ಕಟ್ಟುವುದು ಅಪಾಯಕಾರಿ. ಇಂತಹ ಕೆಲಸಗಳು ಕಂಡುಬಂದರೆ ಸಾರ್ವಜನಿಕರು ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಬೇಕು. ಜತೆಗೆ ತುಂಡಾದ ವಿದ್ಯುತ್ ಅಥವಾ ಇನ್ಸುಲೇಶನ್ ಇಲ್ಲದ ತಂತಿಗಳನ್ನು ಮುಟ್ಟಬಾರದು. ಬಟ್ಟೆಗಳನ್ನು ಒಣಗಿಸಲು ವಿದ್ಯುತ್ ತಂತಿ ಬಳಸಬಾರದು. ವಿದ್ಯುತ್ ಮಾರ್ಗದ ಟವರ್‌ಗಳನ್ನು ಹತ್ತಬಾರದು ಎಂದರು.
ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಮನೋಹರ್ ಶೆಟ್ಟಿ ಮಾತನಾಡಿ, ವಿದ್ಯುತ್ ಅವಘಡಗಳನ್ನು ತಪ್ಪಿಸಲು ಸಾಕಷ್ಟು ಎಚ್ಚರಿಕೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಬೆಸ್ಕಾಂ ಕೈಗೊಳ್ಳಲಾಗುತ್ತಿದೆ. ಆದರೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಳ್ಳತನಕ್ಕೆ ಹೋಗಿ, ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಸಾವು ಸಂಭವಿಸುತ್ತಿವೆ. ದಿನನಿತ್ಯ ಬಳಸುವ ವಿದ್ಯುತ್‌ಶಕ್ತಿಯ ಅನುಕೂಲತೆಗಳನ್ನು ತಿಳಿದಿರುವ ಗ್ರಾಹಕರು, ಅದರ ಬಳಕೆಯಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಉಂಟಾಗುವ ಅನಾಹುತಗಳ ಕುರಿತು ಅರಿವು ಹೊಂದಿರಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net