

ವಿಜಯವಾಣಿ ಸುದ್ದಿಜಾಲ ಉಡುಪಿ
ಶೈಕ್ಷಣಿಕ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಮಾದಕ ದ್ರವ್ಯ ವ್ಯಸನಗಳ ಸವಾಲು ಬಹು ಪ್ರಮುಖವಾಗಿದೆ. ಪದವಿ ಮತ್ತು ಪದವಿ ಪೂರ್ವ ಹಂತದ ವಿದ್ಯಾರ್ಥಿಗಳನ್ನು ಈ ವ್ಯಸನದಿಂದ ದೂರ ಇಡುವ ಪ್ರಯತ್ನ ಮಾಡಬೇಕಿದೆ. ವೈಜ್ಞಾನಿಕವಾಗಿ ಅರಿವು ಮೂಡಿಸುವುದೊಂದೇ ಅದಕ್ಕಿರುವ ಪರಿಹಾರದ ದಾರಿ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ. ಅಭಿಪ್ರಾಯಪಟ್ಟರು.
ಉಡುಪಿಯ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಟ ವಿರೋಧಿ ದಿನಾಚರಣಿ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಭಾರತ ಸರ್ಕಾರ, ನಶಾ ಮುಕ್ತ ಭಾರತ ಅಭಿಯಾನ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ರೆಡ್ಕ್ರಾಸ್ ಸಂಸ್ಥೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆ, ಸಂಘಟನೆ ಸಹಭಾಗಿತ್ವದಲ್ಲಿ ಜೂನ್ 26ರಂದು ಆಯೋಜಿಸಿದ್ದ ಮಾದಕ ವ್ಯಸನದ ವಿರುದ್ಧ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಡಾ. ಎ.ವಿ. ಬಾಳಿಗಾ ಮೆಮೋರಿಯಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುನೀಲ ಜಿ. ಮಾತನಾಡಿ, ಮಾದಕ ದ್ರವ್ಯವು ಹೇಗೆ ಮನಸ್ಸಿನ ಮೇಲೆ ಮತ್ತು ಸಾಮಾಜಿಕವಾಗಿ ದುಷ್ಪರಿಣಾಮ ಬಿರುತ್ತದೆ ಎಂದು ಸಮಗ್ರ ಮಾಹಿತಿ ನೀಡಿದರು.
ಮಂಗಳೂರಿನ ಕೆಎಎಸ್ಡಿಇಎಸ್ನ ಖಜಾಂಚಿ ರೆ. ಐವನ್ ಸೋನ್ಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರತ್ನಾ, ಭಾರತೀಯ ರೆಡ್ಕ್ರಾಸ್ನ ಉಪಸಭಾಪತಿ ಡಾ. ಅಶೋಕಕುಮಾರ್ ವೈ.ಜಿ. ಸಿಎಸ್ಐ ವಲಯಾಧ್ಯಕ್ಷ ರೆ.ಕಿಶೋರಕುಮಾರ್, ರೆಡ್ ಕ್ರಾಸ್ ಆಡಳಿತ ಮಂಡಳಿಯ ಸದಸ್ಯ ಚಂದ್ರಶೇಖರ, ಸ್ವಂದನ ವ್ಯಸನಮುಕ್ತ ಕೇಂದ್ರದ ನರೇಂದ್ರ ನಾಯಕ, ನಿಶಾ ಶೆಟ್ಟಿ, ಡಿಡಿಆರ್ಸಿ ನೋಡಲ್ ಅಧಿಕಾರಿ ಜಯಶ್ರೀ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಜಿಲ್ಲಾ ರೆಡ್ಕ್ರಾಸ್ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಪ್ರಸ್ತಾವಿಕವಾಗಿ ಮಾತಾನಾಡಿ, ಸ್ವಾಗತಿಸಿದರು. ವಿದ್ಯಾರ್ಥಿಗಳಿಗೆ ಜಿಲ್ಲಾ ರೆಡ್ ಕ್ರಾಸ್ ಖಚಾಂಚಿ ರಮಾದೇವಿ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಾಂಶುಪಾಲೆ ಶ್ವೇತಾ ಶ್ರೀನಿವಾಸ ವಂದಿಸಿದರು. ಪ್ರಾಧ್ಯಾಪಕಿ ಡಾ. ನಿಕೇತನಾ ಕಾರ್ಯಕ್ರಮ ನಿರ್ವಹಿಸಿದರು.