

ಬಳ್ಳಾರಿ: ಲಾಕ್‌ಡೌನ್ ನಡುವೆಯೂ ಅನಗತ್ಯ ಹೊರಬರುತ್ತಿರುವ ಜನರಿಗೆ ಪೊಲೀಸರು ಲಾಠಿ ಏಟು, ಬಸ್ಕಿ ಸೇರಿ ನಾನಾ ರೀತಿಯಲ್ಲಿ ಶಿಕ್ಷೆ ನೀಡುತ್ತಿದ್ದಾರೆ. ಇದೀಗ ಜಿಲ್ಲೆಯ ಪೊಲೀಸರು ಕಿರುಚಿತ್ರ ನಿರ್ಮಾಣದ ಮೂಲಕ ಕರೊನಾ ಕುರಿತು ಜಾಗೃತಿಯನ್ನೂ ಮೂಡಿಸಿದ್ದಾರೆ.
ಕರೊನಾ ಭೀತಿಯಿಂದಾಗಿ ಸಂಬಂಧಗಳಿಗೆ ಅರ್ಥವೇ ಇಲ್ಲದಂತಾಗಿದೆ. ಕರೊನಾ ರೋಗ ತಗುಲದಿರಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮನೆಯಿಂದ ಹೊರಗೆ ಬಂದಾಗ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು. ಅಗತ್ಯ ವಸ್ತುಗಳ ಖರೀದಿ ಬಳಿಕ ಮನೆಗೆ ಹೋದಾಗ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು. ತರಕಾರಿ, ಹಣ್ಣು ಇತ್ಯಾದಿ ಅಗತ್ಯ ವಸ್ತುಗಳನ್ನು ನೀರಿನಿಂದ ತೊಳೆದು ಬಳಕೆ ಮಾಡಬೇಕು. ಸರ್ಕಾರ ಜನರ ಒಳ್ಳೆಯದಕ್ಕಾಗಿ ಲಾಕ್‌ಡೌನ್ ಘೋಷಿಸಿದೆ. ನಮಗೂ, ನಮ್ಮ ದೇಶಕ್ಕೂ ಒಳ್ಳೆಯದಾಗುವುದಾದರೆ ಒಂದು ತಿಂಗಳಾದರೂ ಮನೆಯಲ್ಲಿರೋಣ ಎಂಬ ಸಂದೇಶ ಸಾರುತ್ತದೆ ಈ ಕಿರುಚಿತ್ರ. ನೀವು ಮನೆಯಲ್ಲಿದ್ದರೆ ಅದು ನಿಮ್ಮ ಜತೆಗೆ ನಮಗೆಲ್ಲರಿಗೂ ಸುರಕ್ಷತೆ ಎಂಬ ಎಸ್ಪಿ ಸಿ.ಕೆ.ಬಾಬಾ ಅವರ ಸಂದೇಶದೊಂದಿಗೆ ಕಿರುಚಿತ್ರ ಮುಕ್ತಾಯಗೊಳ್ಳುತ್ತದೆ.
ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳು ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಜಿಲಾನ್ ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ. 2.29 ನಿಮಿಷದ ಕಿರುಚಿತ್ರವನ್ನು ಹೊಸಪೇಟೆಯ ಮಹಿನ್ ಜೈನ್ ತಂಡದವರು ಚಿತ್ರೀಕರಿಸಿದ್ದಾರೆ.