

ಕೆ.ಆರ್.ಸಾಗರ: ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಹಯೋಗದಲ್ಲಿ ಬಾಲ್ಯ ವಿವಾಹ ಹಾಗೂ ಭ್ರೂಣ ಹತ್ಯೆ ತಡೆ ಕುರಿತು ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ಮಾತನಾಡಿ, ಬಾಲ್ಯ ವಿವಾಹ ಪದ್ಧತಿ ಸಮಾಜಕ್ಕೆ ದೊಡ್ಡ ಪಿಡುಗಾಗಿದೆ. ನಾವೆಷ್ಟೇ ವಿದ್ಯಾವಂತರಾಗಿ ವೈಜ್ಞಾನಿಕವಾಗಿ ಮುನ್ನುಗ್ಗಿದರೂ ಬಾಲ್ಯ ವಿವಾಹಗಳು ಹಾಗೂ ಭ್ರೂಣ ಹತ್ಯೆಗಳು ಆಗುತ್ತಿವೆ. ಇದನ್ನು ತೊಡೆದು ಹಾಕುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ ಹೆರಿಗೆ ಸಮಯದಲ್ಲಿ ಅಕಾಲಿಕ ಮರಣ ಸಂಭವಿಸುವ ಸಾಧ್ಯತೆ ಇರುತ್ತದೆ. ಜತೆಗೆ ಅತೀ ಕಡಿಮೆ ತೂಕದ ಮಗುವಿನ ಜನನವಾಗಲಿದೆ. ಆದ್ದರಿಂದ ಹೆಣ್ಣು ಮಕ್ಕಳಿಗೆ ಬೇಗ ಮದುವೆ ಮಾಡದೆ ಅವರಿಗೆ ಉನ್ನತ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬ ಪಾಲಕರ ಜವಾಬ್ದಾರಿಯಾಗಿದೆ ಎಂದರು. ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಕುರಿತಂತೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸೌಮ್ಯಾ ಪ್ರತಿಜ್ಞಾವಿಧಿ ಬೋಧಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಕೆ.ಮರಿಸ್ವಾಮಿ, ಸಹಶಿಕ್ಷಕರಾದ ಎಸ್.ಜಯಲಕ್ಷ್ಮೀ, ಎ.ಎಲ್.ಶ್ರುತಿ, ಎಂ.ಎಸ್.ಪುಷ್ಪಲತಾ, ಆಶಾ ಕಾರ್ಯಕರ್ತೆ ರೂಪಾ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.