

ಮೈಸೂರು: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸುವ ಮೂಲಕ ಎಲ್ಲ ಇಲಾಖೆಗಳ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ ತಿಳಿಸಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷಯ ಮುಕ್ತ ಜಿಲ್ಲೆ ಮಾಡಲು ಎಲ್ಲರೂ ಕೈಜೋಡಿಸಬೇಕು. ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಕ್ಷಯ ಇರುವ ರೋಗಿಗಳಿಗೆ ಸರ್ಕಾರದಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕ್ಷಯ ರೋಗ ನಿರ್ಮೂಲನೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಕ್ಷಯ ರೋಗಿಗಳಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು. ತಳಮಟ್ಟದಲ್ಲಿ ಗ್ರಾಮ ಪಂಚಾಯಿತಿ ಕಾರ್ಯ ನಿರ್ವಹಿಸುವುದರಿಂದ ಮೊದಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿರುವ ಉದ್ದೇಶವಾಗಿದೆ. ನಾವು ಯಾವುದೇ ಯೋಜನೆ ಅನುಷ್ಠಾನ ಮಾಡಬೇಕು ಎಂದರೆ ಗ್ರಾಪಂ ಮಟ್ಟಕ್ಕೆ ತೆಗೆದುಕೊಂಡು ಹೋದರೆ ಮಾತ್ರ ಅದು ಅನುಷ್ಠಾನ ಮಾಡಲಿಕ್ಕೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಅನುಷ್ಠಾನ ಮಾಡುವಲ್ಲಿ ಪ್ರಮುಖರಾಗಿದ್ದಾರೆ. ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳನನು ವಿಶ್ವಾಸಕ್ಕೆ ತೆಗೆದುಕೊಂಡು ಅನುಷ್ಠಾನ ಮಾಡಬೇಕು. ಎಲ್ಲರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಸಬೇಕು ಎಂದು ಗಾಯತ್ರಿ ಸೂಚಿಸಿದರು.
ಟಾಸ್ಕ್‌ಪೋರ್ಸ್ ರಚನೆ ಮಾಡಿ:
ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಅಭಿಯಾನ ಯಶ ಗೊಳಿಸಲು ಟಾಸ್ಕ್‌ಪೋರ್ಸ್ ರಚನೆ ಮಾಡಬೇಕು. ಈ ಟಾಸ್ಕ್ ಪೋರ್ಸ್ ರಚಿಸುವ ನಿಟ್ಟಿನಲ್ಲಿ ತಮಗೆ ಕೊಟ್ಟಿರುವಂತಹ ಮಾರ್ಗ ಸೂಚಿಗಳ ಅನ್ವಯ ಕ್ಷೇತ್ರದಲ್ಲಿ ಕೆಲಸ ಮಾಡಿ ಕ್ಷಯ ರೋಗಿಗಳ ಸಂಖ್ಯೆ ಕಡಿಮೆ ಮಾಡಬೇಕು ಎಂದು ಸಿಇಒ ಗಾಯತ್ರಿ ಸಲಹೆ ನೀಡಿದರು.ಕ್ಷಯರೋಗಿಗಳನ್ನು ಗುರುತಿಸುವುದು ಅವರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸುವಂತಹ ಕೆಲಸವನ್ನು ಟಾಸ್ಕ್ ಫೋರ್ಸ್ ಕಡೆಯಿಂದ ಅನುಷ್ಠಾನ ಮಾಡಬೇಕು ಎಂದು ಸೂಚಿಸಿದರು.
ಈ ಕಾರ್ಯಕ್ರಮದ ಜತೆಗೆ ಆರೋಗ್ಯ ಇಲಾಖೆಯ ಇತರ ಯೋಜನೆಗಳನ್ನು ಇಲ್ಲಿ ಅಳವಡಿಸಬೇಕು. ಇದರ ಜತೆಗೆ ಮಾನಸಿಕ ಆರೋಗ್ಯ ಹಾಗೂ ಒತ್ತಡ ನಿರ್ವಹಣೆ ಹೇಗೆ ಕಾಪಾಡಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಕ್ಷಯ ರೋಗವನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಲಾಗಿದೆ ಎಂದು ಗಾಯತ್ರಿ ತಿಳಿಸಿದರು.
ಜತೆಗೂಡಿ ಕಾರ್ಯ ನಿರ್ವಹಿಸಿ: ಕೇಂದ್ರ ಸರ್ಕಾರವು ಕೂಡ ಕ್ಷಯ ಮುಕ್ತ ಭಾರತ ಮಾಡಬೇಕು ಎಂದು ಹಲವು ಯೋಜನೆ ರೂಪಿಸಿದ್ದು, ಈ ನಿಟ್ಟಿನಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ನಮ್ಮ ಜತೆಗೂಡಿ ಹಲವು ಸ್ವಯಂ ಸೇವಕರು ಹಾಗೂ ಸಂಘಟನೆಗಳೂ ಕೆಲಸ ಮಾಡುತ್ತಿವೆ. ಇದರ ಜತೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾತ್ರವಲ್ಲದೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯೂ ಸೇರಿ ಯಶಸ್ವಿಯಾಗಿ ಕೆಲಸವನ್ನು ಮಾಡಬೇಕು ಎಂದು ಸಿಇಒ ಹೇಳಿದರು.
ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಪ್ರಚಾರ ಕೊಡುವುದರ ಮೂಲಕ ತಮ್ಮ ಭಾಗಗಳಲ್ಲಿ ಕ್ಷಯ ಮುಕ್ತ ಮಾಡುವಂತೆ ಕೆಲಸ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕ್ಷಯ ಹೆಚ್ಚಾಗಿ ಕಂಡು ಬರುತ್ತದೆ ಆದ್ದರಿಂದ ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಹೆಚ್ಚು ಒತ್ತನ್ನು ನೀಡಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಿ.ಸಿ ಕುಮಾರಸ್ವಾಮಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಎಂ.ಎಸ್. ಡಾ. ಜಯಂತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.