

ಮಂಡ್ಯ: ತಾಲೂಕಿನ ಬಸರಾಳು ಭಾಗದಲ್ಲಿ ಸಂಚಾರ ನಿಯಮದ ಬಗ್ಗೆ ವೃತ್ತ ನಿರೀಕ್ಷಕ ಎನ್.ವಿ.ಮಹೇಶ್ ಮತ್ತು ಪಿಎಸ್‌ಐ ದೀಕ್ಷಿತ್ ನೇತೃತ್ವದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ.
ಕೆರಗೋಡು ವೃತ್ತ ವ್ಯಾಪ್ತಿಯಲ್ಲಿನ ಬಸರಾಳು, ಕೆರಗೋಡು, ಶಿವಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹಾದು ಹೋಗುವ ನಾಗಮಂಗಲ-ಮಂಡ್ಯ ರಸ್ತೆ, ಮಂಡ್ಯ-ಕೊಪ್ಪ ರಸ್ತೆ ಹಾಗೂ ಶಿವಳ್ಳಿ ಮುಖ್ಯರಸ್ತೆಯಲ್ಲಿ ಆಗಿಂದಾಗ್ಗೆ ರಸ್ತೆ ಅಪಘಾತ ಸಂಭವಿಸುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ಅಪಘಾತ ತಡೆಯುವ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾರ್ಗದರ್ಶನದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯುತ್ತಿದೆ.
ಅದರಂತೆ ವಿವಿಧ ಶಾಲೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರ ನಿಯಮದ ಬಗ್ಗೆ ಅರಿವು ಜಾಗೃತಿ ಕಾರ್ಯಕ್ರಮವನ್ನು ಕೈಗೊಂಡು ಅರಿವು ಮೂಡಿಸಿದರು. ಅಂತೆಯೇ ಮಂಡ್ಯ-ಯಡಿಯೂರು ಮುಖ್ಯರಸ್ತೆಯ ಹುಲಿವಾನ ಮತ್ತು ಮರಿಲಿಂಗನದೊಡ್ಡಿ ಸಮೀಪ ರಸ್ತೆಗೆ ವೈಜ್ಞಾನಿಕ ವಿಭಜಕ ಅಳವಡಿಸಿ ಮತ್ತು ರಸ್ತೆಯ ಪಕ್ಕದಲ್ಲಿರುವ ಮರಗಳಿಗೆ ಪ್ರತಿಫಲಕ ಹಾಕಲಾಗಿದೆ. ಸಂಚಾರ ಮಾಹಿತಿ ಫಲಕಗಳನ್ನು ಸ್ವಚ್ಛ ಮಾಡಿ ಹಾಗೂ ಅಗತ್ಯವಿರುವ ಕಡೆ ಹೆಚ್ಚುವರಿ ಸೂಚನಾ ಫಲಕ ಅಳವಡಿಸಲಾಗುತ್ತಿದೆ. ಪ್ರಮುಖವಾಗಿ ನಿಗದಿತ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಚಲಿಸುವ, ಅಪಾಯಕಾರಿ ಚಾಲನೆ ಮಾಡುವ ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸಿದ ಚಾಲಕರಿಗೆ ದಂಡ ವಿಧಿಸುತ್ತಿದ್ದಾರೆ. ನಿಯಮಗಳನ್ನು ಪಾಲಿಸಲು ಸಾರ್ವಜನಿಕರಿಗೆ ಮನವಿ ಮಾಡುತ್ತಿದ್ದಾರೆ.