ಆನ್‌ಲೈನ್ ಜಗತ್ತಿನ ಜಾಗೃತಿ ಅಗತ್ಯ

Published on

ಮಂಗಳೂರು: ಆನ್‌ಲೈನ್ ಜಗತ್ತನ್ನು ಎಲ್ಲಾ ಬಳಕೆದಾರರಿಗೂ ಸುರಕ್ಷಿತ ಹಾಗೂ ಉತ್ತಮ ಸ್ಥಳವನ್ನಾಗಿ ಮಾಡುವಲ್ಲಿ ಪ್ರತಿಯೊಬ್ಬ ಬಳಕೆದಾರನ ಪಾತ್ರವಿದ್ದು, ಈ ಕುರಿತು ಜನರಲ್ಲಿ ಜಾಗೃತಿ ಅಗತ್ಯ ಎಂದು ದ.ಕ ಜಿಲ್ಲಾ ಪಂಚಾಯಿತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್ ಕೆ. ಹೇಳಿದರು.

ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಇತರ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆನ್‌ಲೈನ್ ಜಗತ್ತಿನ ಬಗ್ಗೆ ಅರಿವು ಹಾಗೂ ಮಾಹಿತಿ ನೀಡುವ ಸಲುವಾಗಿ ಪ್ರತಿ ವರ್ಷ ಫೆಬ್ರವರಿ ತಿಂಗಳ ಎರಡನೇ ಮಂಗಳವಾರದಂದು ವಿಶ್ವ ಸುರಕ್ಷಿತ ಅಂತರ್ಜಾಲ ದಿನ ಆಚರಿಸಲಾಗುತ್ತದೆ. ಈ ವರ್ಷ ವಿಶ್ವ ಸುರಕ್ಷಿತ ಅಂತರ್ಜಾಲ ದಿನವನ್ನು ಜೊತೆಯಾಗಿ ಉತ್ತಮ ಇಂಟರ್ನೆಟ್ ಕಡೆಗೆ ಎಂಬ ಧ್ಯೇಯವಾಕ್ಯದೊಂದಿಗೆ ಫೆ.11 ರಂದು ಆಚರಿಸಲಾಗುತ್ತಿದೆ. ವೈಯಕ್ತಿಕ ನೈರ್ಮಲ್ಯದಷ್ಟೇ ಡಿಜಿಟಲ್ ನೈರ್ಮಲ್ಯ ಕೂಡಾ ಮಹತ್ವದ್ದಾಗಿದ್ದು, ಎಲ್ಲರೂ ಕಂಪ್ಯೂಟರ್ ಮತ್ತು ಇಂರ್ಟನೆಟ್ಟನ್ನು ಬಳಸುವಾಗ ಜವಾಬ್ದಾರಿಯುತವಾಗಿ ಉತ್ತಮ ಸುರಕ್ಷತಾ ಅಭ್ಯಾಸಗಳನ್ನು ಅನುಸರಿಸುವ ಮೂಲಕ ಸೈಬರ್ ವಂಚನೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು ಎಂದರು.

ಜಿಲ್ಲಾ ಎನ್‌ಐಸಿ ಅಧಿಕಾರಿ ಅಶ್ವಿನ್ ಕುಮಾರ್ ರೈ, ಮಂಗಳೂರು ಸೈಬರ್ ಪೋಲಿಸ್ ವಿಭಾಗದ ಎಸಿಪಿ ರವೀಶ್ ನಾಯ್ಕ ಮತ್ತು ಪಿಎಸ್‌ಐ ಮಾರುತಿ ಪಿ. ವೈಯಕ್ತಿಕ ಮಾಹಿತಿಯ ಸುರಕ್ಷತೆ ಮತ್ತು ಸಾಮಾನ್ಯ ಸೈಬರ್ ಬೆದರಿಕೆಗಳಾದ ಡಿಜಿಟಲ್ ಬಂಧನ, ವಂಚನೆ ಕರೆಗಳು, ಫಿಶಿಂಗ್, ಲಾಟರಿ ಹಗರಣ, ಹೂಡಿಕೆ ಹಗರಣ ಮುಂತಾದ ವಂಚನೆಗಳ ಕಾರ್ಯವಿಧಾನ ಹಾಗೂ ಅವುಗಳಿಂದ ನಮ್ಮನ್ನು ರಕ್ಷಿಸಲು ಮುಂಜಾಗ್ರತಾ ಕ್ರಮದ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನೀಡಿದರು.

ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿಗಳು, ಯೋಜನಾ ನಿರ್ದೇಶಕರು, ಹಾಗೂ ಮುಖ್ಯ ಯೋಜನಾ ಅಧಿಕಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net