ಮಾದಕ ವ್ಯಸನ ದುಷ್ಪರಿಣಾಮದ ಅರಿವು ಅವಶ್ಯ

20.ಪಿ ವೈ ಪಿ 01
Published on

ಪಿರಿಯಾಪಟ್ಟಣ: ಇತ್ತೀಚಿನ ದಿನಗಳಲ್ಲಿ ಯುವ ಜನತೆ ದುಶ್ಚಟಗಳಿಂದ ದೂರ ಉಳಿಯುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಗೋವಿಂದರಾಜು ತಿಳಿಸಿದರು.

ಮಾದಕ ವಸ್ತುವ್ಯಸನಮುಕ್ತ ದಿನದ ಅಂಗವಾಗಿ ಶುಕ್ರವಾರ ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ನಿಷೇಧದ ಕುರಿತ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಲಾ, ಕಾಲೇಜು ಮತ್ತು ಆಸ್ಪತ್ರೆಗಳ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಎಳೆಯ ವಯಸ್ಸಿನವರು ಕುತೂಹಲದಿಂದ ಮಾದಕ ವಸ್ತುಗಳನ್ನು ಸೇವಿಸಿ ವ್ಯಸನಿಗಳಾಗುತ್ತಿದ್ದಾರೆ. ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಮಾದಕ ವ್ಯಸನಿಗಳನ್ನು ಕಳ್ಳತನ, ಅತ್ಯಾಚಾರ ಮತ್ತಿತರ ಅಪರಾಧ ಕೃತ್ಯಗಳಿಗೆ ಬಳಸಿಕೊಂಡು ಸಮಾಜದ ನೆಮ್ಮದಿ ಕೆಡಿಸುವ ಒಂದು ವರ್ಗವೇ ಇದೆ. ಅಫೀಮು, ಗಾಂಜಾ, ಚರಸ್, ತಂಬಾಕು ಪದಾರ್ಥಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ರವಿಪ್ರಸನ್ನ ಮಾತನಾಡಿ, ಮಾದಕ ವ್ಯಸನಿಗಳು ಸಮಾಜಕ್ಕೆ ಹೊರೆಯಾಗುತ್ತಿದ್ದು ಸಾಮಾಜಿಕ ಸ್ವಾಸ್ಥ್ಯ ಕಲುಷಿತಗೊಳಿಸುತ್ತಿದ್ದಾರೆ ಎಂದರು.

ಯುವಜನತೆ ಕ್ಷಣಿಕ ಸುಖಕ್ಕಾಗಿ ಮಾದಕ ವ್ಯಸನಿಗಳಾಗುವುದನ್ನು ತಡೆಗಟ್ಟಬೇಕಿದೆ, ಮಾದಕ ಪದಾರ್ಥಗಳ ಸೇವನೆಯಿಂದಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಅವರನ್ನು ಸರಿದಾರಿಗೆ ತರಬೇಕು ಎಂದರು. ಪಾಲಕರು ತಮ್ಮ ಮಕ್ಕಳ ನಡವಳಿಕೆಗಳು ಮತ್ತು ಚಲನವಲನಗಳ ಬಗ್ಗೆ ಗಮನ ಹರಿಸಬೇಕು, ಪ್ರೀತಿಯಿಂದ ಮಕ್ಕಳ ಬೇಕು ಬೇಡಗಳನ್ನು ಪೂರೈಸಬೇಕು ಎಂದು ಕಿವಿಮಾತು ಹೇಳಿದರು. ಹಲವು ಸಂದರ್ಭಗಳಲ್ಲಿ ಮಕ್ಕಳು ಮಾನಸಿಕ ಒತ್ತಡಕ್ಕೆ ಸಿಲುಕಿ ಮಾದಕ ವ್ಯಸನಿಗಳಾಗುತ್ತಿದ್ದಾರೆ, ಔಷಧ ಅಂಗಡಿಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಮಾರಾಟ ಮಾಡುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು, ಮಾದಕ ವ್ಯಸನಿಗಳನ್ನು ಪುನರ್ವಸತಿ ಕೇಂದ್ರಗಳಿಗೆ ಸೇರಿಸಿ ಆರೈಕೆ ಮಾಡುವುದು ಬಹುಮುಖ್ಯವಾದ ಕೆಲಸ ಎಂದರು.

ಕಾರ್ಯಕ್ರಮದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಪ್ರವೀಣ್, ಪೊಲೀಸ್ ಸಿಬ್ಬಂದಿ ನವೀನ್, ಅಣ್ಣಯ್ಯ, ಮಧು, ಗಣೇಶ್, ಪುನೀತ್, ಅರುಣ್ ಸೇರಿದಂತೆ ವಿವಿಧ ಶಾಲಾ, ಕಾಲೇಜುಗಳಿಂದ ಆಗಮಿಸಿದ್ದ ಉಪನ್ಯಾಸಕರು, ಶಿಕ್ಷಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net