

ಬೇಲೂರು: ಪ್ರತಿ ವರ್ಷದಂತೆ ನಮ್ಮ ಶಾಲೆಯಲ್ಲಿ ಮಕ್ಕಳಿಗಾಗಿ ವಿವಿಧ ವೇಷಭೂಷಣ ಸ್ಪರ್ಧೆ ಆಯೋಜಿಸುವ ಮೂಲಕ ಮಕ್ಕಳ ದಿನ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಐಡಿಯಲ್ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥೆ ರುಮಾನ ಹೇಳಿದರು.
ಪಟ್ಟಣದ ಐಡಿಯಲ್ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಹುಟ್ಟಿದ ದಿನದ ಅಂಗವಾಗಿ ಆಯೋಜಿಸಿದ್ದ ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿದರು.
ನಮ್ಮ ಸಂಸ್ಕೃತಿ, ಸಂಸ್ಕಾರದ ಜತೆಗೆ ಇತಿಹಾಸ ಹಾಗೂ ಮಹಾನ್ ಪುರುಷರ ತತ್ವಾದರ್ಶವನ್ನು ಅನುಸರಿಸಬೇಕು. ಶಿಕ್ಷಣದ ಜತೆಗೆ ನಮ್ಮ ನಾಡಿನ ಪರಂಪರೆ, ವೈಚಾರಿಕ ಜ್ಞಾನದ ಅಗತ್ಯ ಪ್ರತಿಯೊಂದು ಮಗುವಿಗೂ ಅವಶ್ಯವಾಗಿದೆ. ಇಲ್ಲಿ ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ನಾವೆಲ್ಲರೂ ಒಂದೇ ಎನ್ನುವ ಕೆಲಸ ಮಾಡಬೇಕು. ಇದರಲ್ಲಿ ಪಾಲಕರ ಹಾಗೂ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳು ವಿವಿಧ ವೇಷಭೂಷಣಗಳೊಂದಿಗೆ ಮಿಂಚಿದರು. ಶಾಲಾ ಶಿಕ್ಷಕರು ಹಾಗೂ ಪಾಲಕರಿದ್ದರು.