ವೈಚಾರಿಕತೆಯ ಅರಿವು ಮೂಡಿಸುವುದು ಅಗತ್ಯ

10 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಶ ಎಂದರೆ ಗಡಿ, ಧ್ವಜ ಮಾತ್ರ ಎಂಬಂತಾಗಿದೆ. ಗಡಿಗಳಲ್ಲಿ ಸೈನಿಕರು ಹುತಾತ್ಮರಾದರೆ ಗೌರವಿಸಲಾಗುತ್ತದೆ. ಆದರೆ ಪಕ್ಕದ ಮನೆ ವ್ಯಕ್ತಿ ಮೃತಪಟ್ಟರೆ ಅವರ ಮನೆಗೆ ಹೋಗುವುದೂ ಇಲ್ಲ. ದೇಶ ಎಂದರೆ ಕೇವಲ ಸೈನಿಕರಷ್ಟೇ ಅಲ್ಲ. ದೇಶವಾಸಿಗಳು ಎಂಬುದು ನಮಗೆ ಮನವರಿಕೆಯಾಗಬೇಕು ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ. ಎಂ. ಚಂದ್ರ ಪೂಜಾರಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯ ಆವರಣದಲ್ಲಿನ ಡಾ. ಎಂ.ಎಂ. ಕಲಬುರ್ಗಿ ಅವರ ಸಮಾಧಿ ಬಳಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಪರಿವರ್ತನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಟರು, ಢೋಂಗಿ ಸ್ವಾಮೀಜಿಗಳು ಸಮಾಜಕ್ಕೆ ಏನೆಲ್ಲ ಕೊಡುಗೆ ನೀಡುತ್ತಿದ್ದಾರೆ ಎಂಬುದನ್ನು ನಾವೆಲ್ಲ ಅರಿಯಬೇಕು. ಇಂತಹವರಿಗೆ ಮಾಧ್ಯಮಗಳು ಪ್ರಚಾರ ನೀಡಿ ಹೀರೋಗಳಂತೆ ಬಿಂಬಿಸುತ್ತಿವೆ. ಇನ್ನು ಉತ್ಪಾದಕರು ಪರಾವಲಂಬಿಗಳಂತೆ ಬದುಕುತ್ತಿದ್ದು, ದುಡಿಯುವ ವರ್ಗದವರು ಕೂಲಿಗೆ ಬಡಿದಾಡುವ ಸ್ಥಿತಿ ಇರುವುದು ಶೋಚನೀಯ ಎಂದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಮನುವಾದದ ವ್ಯಾಪ್ತಿ ವಿಸ್ತರಿಸುತ್ತಿದೆ. ಮೌಢ್ಯವನ್ನು ಬಿತ್ತಲಾಗುತ್ತಿದೆ. ಇಂತಹ ಸಮಯದಲ್ಲಿ ವೈಚಾರಿಕತೆಯ ಅರಿವು ಮೂಡಿಸುವುದು ನಮ್ಮ ಉದ್ದೇಶ. ಮನುವಾದಕ್ಕೆ ಪ್ರತಿಯಾಗಿ ಅಂಬೇಡ್ಕರ ವಾದ ಬೆಳೆಸಬೇಕಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಿನಲ್ಲಿ ಗುರುಕುಲ ಪದ್ಧತಿ ಹೇರಿ ಪಠ್ಯಪುಸ್ತಕಗಳನ್ನು ಕಲುಷಿತಗೊಳಿಸಲಾಗುತ್ತಿದೆ. ಕೋಮುವಾದಿ ಸಂಘಟನೆಗಳು ದೇಶಪ್ರೇಮಿ ಸಂಘಟನೆಗಳೆಂದು ಬಿಂಬಿತವಾಗುತ್ತಿವೆ. ಈ ಸನ್ನಿವೇಶದಲ್ಲಿ ಎಲ್ಲ ಪ್ರಗತಿಪರ ಸಂಘಟನೆಗಳು ಸೇರಿ ಬುದ್ಧಭಾರತ ನಿರ್ಮಿಸಲು ಕೈಜೋಡಿಸಬೇಕು ಎಂದರು.
ಡಾ. ಎಂ.ಎಂ. ಕಲಬುರ್ಗಿ ಟ್ರಸ್ಟ್ ಅಧ್ಯಕ್ಷ ಡಾ. ವೀರಣ್ಣ ರಾಜೂರ ಮಾತನಾಡಿ, ಗೋತ್ರ, ಸೂತ್ರದ ಬಲೆಯಲ್ಲಿ ಕಟ್ಟಿಹಾಕಿದ ಮೌಢ್ಯ ಕಿತ್ತೊಗೆಯಬೇಕು. ಮೂಢಾಚಾರದ ಮೂಲೋತ್ಪಾಟನೆ ನಮ್ಮ ಉದ್ದೇಶವಾಗಬೇಕು. ದೇವರು ಹಾಗೂ ದೇವಾಲಯಗಳೇ ಮೂಢಾಚಾರಗಳು ಹಾಗೂ ಕಂದಾಚಾರಗಳಿಗೆ ಮೂಲ ಕಾರಣ. ಹೀಗಾಗಿ 12ನೇ ಶತಮಾನದಲ್ಲಿ ಶರಣರು ಇಷ್ಟಲಿಂಗ ಪೂಜೆ ಆರಂಭಿಸಿದರು. ಸಮಾಜದಲ್ಲಿ ಸಮಾನತೆ ತರಲು ಅರಿವಿನ ಕುರುಹಾದ ಲಿಂಗವನ್ನು ಶರಣರು ನೀಡಿದರು ಎಂದರು.
ಆಳಂದ ಅನುಭವ ಮಂಟಪದ ಶ್ರೀ ಕೋರಣೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹಿರಿಯ ಚಿಂತಕ ಡಾ. ರಂಜಾನ್ ದರ್ಗಾ ಅಧ್ಯಕ್ಷತೆ ವಹಿಸಿದ್ದರು. ಡಾ. ಎಸ್.ಸಿ. ನಾಟೀಕಾರ, ತೋಳಿ ಭರಮಣ್ಣ, ಡಾ. ಜೆ.ಎಸ್. ಪಾಟೀಲ, ಡಾ. ಸ್ವಾಮಿ ಎಚ್.ಅರ್, ಮೆಹಬೂಬ ರಾಮದುರ್ಗ, ಕೆ.ಎಚ್. ಪಾಟೀಲ, ಪಿ.ಕೆ. ನೀರಲಕಟ್ಟಿ, ವೀರಣ್ಣ ಶೆಟ್ಟರ್, ತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net