

ಭಟ್ಕಳ: ರಕ್ತದಾನ ಮಹಾದಾನ. ಆರೋಗ್ಯವಂತರು ರಕ್ತದಾನ ಮಾಡಬಹುದು ಎಂದು ಟಿಎಚ್‌ಒ ಡಾ. ಸವಿತಾ ಕಾಮತ ಹೇಳಿದರು.
ಆರೋಗ್ಯ ಇಲಾಖೆ, ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಹಾಗೂ ರಕ್ತನಿಧಿ ಕೇಂದ್ರ ಜಿಲ್ಲಾಸ್ಪತ್ರೆ ಆಶ್ರಯದಲ್ಲಿ ಪಟ್ಟಣದ ಶ್ರೀಗುರುರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕೆಲವರು ರಕ್ತ ನೀಡುವ ಮೊದಲೇ ನಾವು ರಕ್ತ ನೀಡಿದರೆ ನಮಗೆ ಬೇಕಾದಾಗ ಏನು ಮಾಡಬೇಕು?ನಮಗೆ ಸಿಗುತ್ತದಾ ಎಂದೆಲ್ಲ ಪ್ರಶ್ನೆಗಳನ್ನು ಕೇಳುತ್ತಾರೆ. ದಾನ ನೀಡುವಾಗ ನಮಗೆ ಬೇಕು ಎಂಬ ಭಾವನೆ ಇಟ್ಟುಕೊಳ್ಳಬಾರದು ಮತ್ತು ಬಯಸಬಾರದು. ರಕ್ತ ಮಾತ್ರವಲ್ಲ, ಅಂಗಾಂಗ ದಾನಗಳ ಕುರಿತು ಭಾರತದಲ್ಲಿ ಜನರಿಗೆ ಅಷ್ಟೊಂದು ಅರಿವು ಇಲ್ಲ. ವಿದೇಶಗಳಲ್ಲಿ 60ರ ಹರೆಯದಲ್ಲೂ ಕಿಡ್ನಿ ಕಸಿಯಂತಹ ಚಿಕಿತ್ಸೆಗಳು ನಿರಾಯಾಸವಾಗಿ ನಡೆಯುತ್ತದೆ. ಮೃತ ಸ್ವಸ್ಥ ವ್ಯಕ್ತಿ ಅಂಗಾಂಗಗಳನ್ನು ದಾನ ಮಾಡುತ್ತಾರೆ. ನಮ್ಮಲ್ಲೂ ಇಂತಹ ದಾನಗಳ ಬಗೆಗೆ ಅರಿವು ಮೂಡಿಸಬೇಕಿದೆ ಎಂದರು.
ಉಡುಪಿ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ. ವೀಣಾ ಕುಮಾರಿ, ಜಿಎಸ್‌ಎಸ್ ಅಧ್ಯಕ್ಷ ಗಿರಿಧರ ನಾಯಕ, ನಾಗೇಶ ಭಟ್ ಮಾತನಾಡಿದರು. ರಕ್ತದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಹಿಳಾ ಮಂಡಲದ ಅಧ್ಯಕ್ಷೆ ಸುನಿತಾ ಪೈ ಇದ್ದರು. ಒಟ್ಟು 64 ಯೂನಿಟ್ ರಕ್ತವನ್ನು ಉಡುಪಿ ಬ್ಲಡ್ ಬ್ಯಾಂಕಿಗೆ ಕಳುಹಿಸಲಾಯಿತು. ಗುರುದಾಸ ಪ್ರಭು ಕಾರ್ಯಕ್ರಮ ನಿರ್ವಹಿಸಿದರು. ದೀಪಕ ನಾಯಕ ಸಹಕರಿಸಿದರು.