

ಕುಶಾಲನಗರ: ಇಂದಿನ ಮಕ್ಕಳಿಗೆ ತಾಯಂದಿರು ಕಡ್ಡಾಯವಾಗಿ ವಚನಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಅವರನ್ನು ಉತ್ತಮ ಪ್ರಜೆಗಳಾಗಿ ರೂಪಿಸಬೇಕು ಎಂದು ಹೆಬ್ಬಾಲೆ ಪ್ರೌಢ ಶಾಲೆ ಕನ್ನಡ ಉಪನ್ಯಾಸಕ, ಸಾಹಿತಿ ಮೆ.ನಾ.ವೆಂಕಟನಾಯಕ್ ತಿಳಿಸಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಗಿರಗೂರಿನ ಗಿರಿಜೇಶ್ವರ ದೇವಾಲಯದ ಆವರಣದಲ್ಲಿ ಸುತ್ತೂರು ವೀರಸಿಂಹಾಸನ ಮಹಾ ಸಂಸ್ಥಾನದಿಂದ ಸಹಯೋಗದಲ್ಲಿ ಆಯೋಜಿಸಿದ್ದ ಶರಣ ಸಾಹಿತ್ಯ ಪ್ರಸಾರ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಳೆಯ ಮಕ್ಕಳಿಗೆ ತಾಯಂದಿರು ಹಾಲುಣಿಸುವಾಗಲೇ ವಚನಗಳ ಅರಿವನ್ನು ಮೂಡಿಸಬೇಕು. ಆ ಮೂಲಕ ವಚನಗಳು ನಿತ್ಯದ ಬದುಕಿನ ಪ್ರಾರ್ಥನಾ ಗೀತೆಗಳಾಗಿಸಿದಲ್ಲಿ ಹನ್ನೆರಡನೇ ಶತಮಾನದ ಕಲ್ಯಾಣ ರಾಜ್ಯವನ್ನು ಕಾಣಲು ಸಾಧ್ಯವಾಗುತ್ತದೆ. ಮಹಿಳೆಯರು, ಮಕ್ಕಳು ಹಾಗೂ ಇಂದಿನ ತರುಣರು ಮೊಬೈಲ್ ಹಾಗೂ ಟಿವಿ ವ್ಯಾಮೋಹ ಬಿಟ್ಟು ವಚನ ಸಾಹಿತ್ಯ ಓದುವುದನ್ನು ರೂಢಿಸಿಕೊಳ್ಳಲು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಅಧ್ಯಕ್ಷ ಎಚ್.ವಿ.ಶಿವಪ್ಪ ಮಾತನಾಡಿ, ವಿಶ್ವದ ಮೇರು ಸಾಹಿತ್ಯವಾದ ವಚನ ಸಾಹಿತ್ಯವನ್ನು ನಾಡಿನಾದ್ಯಂತ ಪ್ರಸರಿಸುವ ಉದ್ದೇಶದಿಂದ ಸುತ್ತೂರು ಜಗದ್ಗುರು ಲಿಂ.ರಾಜೇಂದ್ರ ಸ್ವಾಮೀಜಿ ಶರಣ ಸಾಹಿತ್ಯ ಪರಿಷತ್ತನ್ನು ಆರಂಭಿಸಿದರು. ವಚನ ಅಧ್ಯಯನ ಹಾಗೂ ಅರಿವು ಮನುಷ್ಯನಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುತ್ತದೆ ಎಂದರು.
ಕುಶಾಲನಗರ ವೀರಶೈವ ಸಮಾಜದ ಅಧ್ಯಕ್ಷ ಎಂ.ಎಸ್.ಶಿವಾನಂದ ಮಾತನಾಡಿದರು. ಗಿರಿಜೇಶ್ವರ ದೇವಾಲಯ ಧರ್ಮದರ್ಶಿ ಬಿ.ನಟರಾಜು, ಕೊಪ್ಪಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೀಲಾ ನಂದೀಶ್, ಪ್ರಗತಿ ಪರ ಕೃಷಿಕ ವಿಜಯಣ್ಣ, ಪಿರಿಯಾಪಟ್ಟಣದ ವೇದಾಗಮ ಪಂಡಿತ ಪುಟ್ಟಸ್ವಾಮಿ ಶಾಸ್ತ್ರಿ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ನಿಯೋಜಿತ ಅಧ್ಯಕ್ಷ ಕೆ.ಎಸ್.ಮೂರ್ತಿ, ಶಿಕ್ಷಕ ಸಂಗಮೇಶ್, ವಕೀಲ ಸಿ.ಎಸ್.ಮಂಜುನಾಥ್, ಚಿಕ್ಕಹೊಸೂರಿನ ಯಜಮಾನ ಪ್ರಭು, ಅಕ್ಕನ ಬಳಗದ ವಿಜಯಮ್ಮ, ಸರೋಜಾ ಆರಾಧ್ಯ, ರೇಖಾ ನಟರಾಜು ಇತರರು ಇದ್ದರು.
ದೇವಾಲಯದ ವತಿಯಿಂದ ನಿಯೋಜಿತ ಶಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ ಅವರನ್ನು ಸನ್ಮಾನಿಸಲಾಯಿತು.