

ಮಂಡ್ಯ: ಯುವ ಜನತೆ ಮಾದಕ ವಸ್ತುಗಳ ಪರವಾಗಿ ಜಾಹೀರಾತು ನೀಡುವ ಅದರ ಸೌಂದರ್ಯಕ್ಕೆ ಮಾರು ಹೋಗದೇ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಬದುಕು ಸೇವಾ ಸಮಿತಿ ಅಧ್ಯಕ್ಷ ಎಚ್.ಆರ್.ಅರವಿಂದ್ ಸಲಹೆ ನೀಡಿದರು.
ನಗರದ ಗುತ್ತಲು ಬಡಾವಣೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಬದುಕು ಸೇವಾ ಸಮಿತಿ, ಅಮೃತ ಅಲಯನ್ಸ್ ಸಂಸ್ಥೆ, ಎಲ್ಲರೊಳಗೊಂದು ಮಂಕುತಿಮ್ಮ ಸೇವಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ಬಗ್ಗೆ ಅರಿವು ಹಾಗೂ ಮಾದಕ ವಸ್ತುಗಳ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಹೊರಗಡ ವಿದ್ಯಾಭ್ಯಾಸಕ್ಕೆಂದು ಹೋಗುವ ಕೆಲವು ಮಕ್ಕಳು ವ್ಯಸನಿಗಳಾಗಿ ಹೊರಹೊಮ್ಮುತ್ತಿದ್ದಾರೆ. ಅವರಿಗೆ ಅರಿವಿನ ಕೊರತೆ ಕಡಿಮೆ ಇರುತ್ತದೆ. ಈ ದೇಶದ ಭವಿಷ್ಯ ಯುವ ಜನತೆಯಲ್ಲಿದೆ. ಅಂತಹ ಯುವ ಸಮೂಹಕ್ಕೆ ಇದು ಕಪ್ಪು ಚುಕ್ಕೆಯಾಗಿ ಮಾದಕ ವ್ಯಸನ ಎಂಬುದು ಕಾಣುತ್ತದೆ. ಅದನ್ನು ಬೇರಿನಿಂದಲೇ ಕಿತ್ತು ಎಸೆಯಬೇಕು ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಹಮದ್ ಸುಹೇಲ್ ಮಾತನಾಡಿ, ಕುಡಿತದ ವ್ಯಸನಕ್ಕೆ ಸಂಪೂರ್ಣ ಚಿಕಿತ್ಸೆಯಿಲ್ಲ. ಮುಂಜಾಗ್ರತೆ ಕ್ರಮವೇ ಇದಕ್ಕೆ ಪರಿಹಾರ. ಮಾದಕ ವ್ಯಸನದ ಕೆಟ್ಟ ಚಟದಿಂದ ದೂರ ಇರಬೇಕು. ಕುಡಿತದಿಂದ ಮೊದಲು ಮಿದುಳಿಗೆ ಹಾನಿ ಉಂಟಾಗುತ್ತದೆ. ಮೆದುಳು ಚೆನ್ನಾಗಿದ್ದರೆ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ ಎಂದು ಸಲಹೆ ನೀಡಿದರು.
ಮಂಡ್ಯ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ಲೋಕೇಶ್, ಶಿಕ್ಷಕ ಅಪ್ಪಾಜಯ್ಯ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಿ.ಎಸ್.ಮಂಜುನಾಥ್, ರಾಜೇಶ್ವರಿ ಇದ್ದರು. ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.