ಯುವಕರು ಮಾದಕ ಚಟದಿಂದ ದೂರವಿರಲಿ: ಅಬಕಾರಿ ಇಲಾಖೆ ಉಪ ಆಯುಕ್ತ ರವಿಶಂಕರ್ ಸಲಹೆ

Awareness of drug addiction mandya
Published on

ಮಂಡ್ಯ: ಯುವಕರು ಕುತೂಹಲಕ್ಕಾಗಿ ಮಾದಕ ವ್ಯಸನಕ್ಕೆ ಒಳಗಾಗಿ ಮುಂದೆ ಅದೇ ಚಟದಿಂದ ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುವ ಸ್ಥಿತಿಗೆ ತಲುಪುತ್ತಾರೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಎ.ರವಿಶಂಕರ್ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ಹೊಸೂರು ಕಾಲನಿಯ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಮಂಡ್ಯ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ‘ಮಾದಕ ವ್ಯಸನದ ಬಗ್ಗೆ ಅರಿವು ಮತ್ತು ಶಿಕ್ಷಣ ಕಾರ್ಯಕ್ರಮ’ದಲ್ಲಿ ಮಾತನಾಡಿದರು.

ಕೆಟ್ಟ ಸ್ನೇಹಿತರ ಸಹವಾಸದಿಂದ ದುಶ್ಚಟಕ್ಕೆ ಬಿದ್ದು ಇನ್ನಿತರೆ ದುರಭ್ಯಾಸಕ್ಕೆ ಒಳಗಾಗಿ ತಮ್ಮ ಬದುಕನ್ನೇ ನಾಶಪಡಿಸಿಕೊಳ್ಳುತ್ತಾರೆ. ಆದ್ದರಿಂದ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ನಾಗರಿಕರಾಗಿ ಎಂದು ಸಲಹೆ ನೀಡಿದರು.

ಕೆರಗೋಡು ಆರಕ್ಷಕ ವೃತ್ತ ನಿರೀಕ್ಷಕ ಎನ್.ವಿ.ಮಹೇಶ್ ಮಾತನಾಡಿ, ಹೊರ ರಾಜ್ಯಗಳಿಂದ ಬಂದು ನಮ್ಮ ಊರುಗಳಲ್ಲಿ ಮನೆ ಮಾಡಿ ಇಲ್ಲೇ ಡ್ರಗ್ಸ್ ಉತ್ಪಾದನೆ ಮಾಡಿ ಚಟವುಳ್ಳವರಿಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ. ಆದ್ದರಿಂದ ಯುವಕರು ಜಾಗೃತರಾಗಿ ಕೆಟ್ಟ ಚಟಗಳಿಗೆ ಬಲಿಯಾಗದೆ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಸ್ನಾತಕೋತ್ತರ ಕೇಂದ್ರದ ಜಿ.ಎನ್.ಕಿರಣ್, ಕೆರಗೋಡು ಠಾಣೆ ಪಿಎಸ್‌ಐ ದೀಕ್ಷಿತ್, ಜಿಲ್ಲಾ ತಂಬಾಕು ನಿಯಂತ್ರಣ ಸಲಹೆಗಾರ ತಿಮ್ಮರಾಜು, ರೋಟರಿ ಸಂಸ್ಥೆ ನಿಕಟ ಪೂರ್ವ ಅಧ್ಯಕ್ಷೆ ಬಿ.ಎಸ್.ಅನುಪಮಾ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪಾರ್ಥ, ನೆಹರು ಯುವ ಕೇಂದ್ರದ ಹರ್ಷ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net