ಜಾಗೃತಿ, ಲಸಿಕಾಕರಣ ಚುರುಕು : ನಿಯಮ ಉಲ್ಲಂಘನೆಯಾಗದಂತೆ ಜಾಗ್ರತೆ

8CBP2a
Published on

ಚಿಕ್ಕಬಳ್ಳಾಪುರ: ಒಮಿಕ್ರಾನ್ ಸೋಂಕಿನ ಆತಂಕದ ನಡುವೆ ಜಿಲ್ಲೆಯಲ್ಲಿ ಕರೊನಾ ಜಾಗೃತಿ ಮತ್ತು ಲಸಿಕಾ ತಂಡಗಳ ಚಟುವಟಿಕೆ ಬಿರುಸುಗೊಂಡಿದೆ. ಮನೆ ಮನೆಗೂ ಭೇಟಿ ನೀಡಿ ಅರಿವು ಮೂಡಿಸುತ್ತಿರುವ ಜತೆಗೆ ಹಳ್ಳಿಗರು ಕೆಲಸ ಮಾಡುವ ಜಮೀನು, ತೋಟಗಳಿಗೆ ತೆರಳಿ ಲಸಿಕೆ ನೀಡಲಾಗುತ್ತಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಕರೊನಾ ಸೋಂಕು ನಿಯಂತ್ರಣದಲ್ಲಿದೆ. ಆದರೆ ಒಮಿಕ್ರಾನ್ ಮೂರನೇ ಅಲೆ ಸೃಷ್ಟಿಸುವ ಆತಂಕ ರಾಜ್ಯವನ್ನು ಕಾಡುತ್ತಿದ್ದು ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವುದರಿಂದ ಜಿಲ್ಲೆಯಲ್ಲಿ ಎಚ್ಚರಿಕೆ ವಹಿಸಲಾಗಿದೆ. ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ಆಯಾ ವಾರ್ಡ್‌ವಾರು ಮತ್ತು ಗ್ರಾಮ ಪಂಚಾಯಿತಿ ಟಾಸ್ಕ್ ಫೋರ್ಸ್ ಕಮಿಟಿಗಳ ಜವಾಬ್ದಾರಿ ನಿರ್ವಹಣೆಯನ್ನು ಚುರುಕುಗೊಳಿಸಲಾಗಿದೆ.

ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಲಸಿಕಾ ಕೇಂದ್ರಗಳಲ್ಲಿ ಬಂದ ಜನರಿಗೆ ಲಸಿಕೆ ಹಾಕುವುದರ ಜತೆಗೆ ಸಿಬ್ಬಂದಿ ಜನರ ಬಳಿಗೆ ತೆರಳುತ್ತಿದ್ದಾರೆ. ತೋಟಗಳು, ಅಶ್ವತ್ಥಕಟ್ಟೆ, ಪ್ರಮುಖ ವೃತ್ತಗಳಲ್ಲಿ ಮುಂಜಾಗ್ರತಾ ಕ್ರಮಗಳ ಪಾಲನೆಯ ಮಹತ್ವವನ್ನು ತಿಳಿಸಿ, ಸ್ಥಳದಲ್ಲಿಯೇ ಲಸಿಕೆ ಹಾಕಿಸುತ್ತಿದ್ದಾರೆ.

ಲಸಿಕಾಕರಣವು ನಿರಂತರ ಪ್ರಕ್ರಿಯೆ. ಆದರೆ, ಜಿಲ್ಲೆಯಲ್ಲಿ ಸೋಂಕಿನ ತೀವ್ರತೆ ಕಡಿಮೆಯಾಗಿದೆ ಎಂದು ಹಲವರು ನಿರ್ಲಕ್ಷ್ಯ ತೋರುತ್ತಿದ್ದು ಈಗಲೂ ಅಲ್ಲಲ್ಲಿ ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅವರ ಮನವೊಲಿಕೆ ಅಧಿಕಾರಿಗಳಿಗೆ ತಲೆನೋವಾಗಿದೆ. ಮತ್ತೊಂದೆಡೆ ಒಮಿಕ್ರಾನ್ ಆತಂಕದಿಂದ ನಗರ, ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ಮಾತ್ರ ಜನರು ಸ್ವಯಂ ಪ್ರೇರಣೆಯಿಂದ ಲಸಿಕೆ ಪಡೆಯಲು ಮುಂದಾಗುತ್ತಿದ್ದಾರೆ.

ಲಸಿಕಾಕರಣಕ್ಕೆ ಸಹಕಾರ ಅಗತ್ಯ: ಕರೊನಾ ಕಡಿಮೆಯಾಗಿದ್ದರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸ್  ಬಳಕೆ, ಪರಸ್ಪರ ಅಂತರ ಕಾಯ್ದುಕೊಳ್ಳುವಿಕೆಯ ಮಾರ್ಗಸೂಚಿ ನಿಯಮಗಳನ್ನು ಪಾಲಿಸಬೇಕು. ಕರೊನಾ ರೋಗದಿಂದ ಮುಕ್ತರಾಗಲು ಲಸಿಕೆಯೊಂದೇ ಪ್ರಮುಖ ಅಸ್ತ್ರ. ಜಿಲ್ಲೆಯಲ್ಲಿ ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ಬಂದು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಶೇ.100 ರಷ್ಟು ಲಸಿಕಾಕರಣಕ್ಕೆ ಸಹಕಾರ ನೀಡಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.

ಜಿಲ್ಲೆಯಲ್ಲಿ ತ್ವರಿತ ಗುರಿ ಸಾಧನೆ: ಜಿಲ್ಲೆಯಲ್ಲಿ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯ ಆಡಳಿತ ಸಂಸ್ಥೆಗಳ ಸಿಬ್ಬಂದಿ ಆಯಾ ವ್ಯಾಪ್ತಿಯಲ್ಲಿ ವಿಶೇಷ ಲಸಿಕಾ ಮೇಳ, ಮನೆ ಮನೆ ಸಮೀಕ್ಷೆ ಮತ್ತು ವ್ಯಾಪಕ ಜಾಗೃತಿ ಕಾರ್ಯಕ್ರಮಗಳ ಮೂಲಕ ತ್ವರಿತ ಗುರಿ ಸಾಧನೆಗೆ ಶ್ರಮಿಸುತ್ತಿದ್ದಾರೆ. ನಿರಂತರವಾಗಿ ಕರೊನಾ ಲಸಿಕಾಕರಣದಲ್ಲಿ ಅತಿ ಹೆಚ್ಚು ಮಂದಿಗೆ ಲಸಿಕೆ ಹಾಕಿಸುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದೊಂದಿಗೆ ಮೆಚ್ಚುಗೆಗೆ ಪಾತ್ರವಾಗಿದೆ.

ಸಾಧನೆ: ಜಿಲ್ಲೆಯಲ್ಲಿ ಬುಧವಾರ ಬರೋಬ್ಬರಿ 17,046 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದರಲ್ಲಿ 18 ವರ್ಷ ಮೇಲ್ಪಟ್ಟವರ ಪೈಕಿ 2,180 ಮಂದಿ ಮೊದಲ ಡೋಸ್ ಮತ್ತು 9,482 ಮಂದಿ ಎರಡನೇ ಡೋಸ್, 45 ವರ್ಷ ಮೇಲ್ಪಟ್ಟು 59 ವರ್ಷದೊಳಗಿನವರ ಪೈಕಿ 686 ಮಂದಿ ಮೊದಲ ಡೋಸ್ ಮತ್ತು 2,782 ಮಂದಿ ಎರಡನೇ ಡೋಸ್, 60 ವರ್ಷ ಮೇಲ್ಪಟ್ಟವರ ಪೈಕಿ 514 ಮಂದಿ ಮೊದಲ ಡೋಸ್ ಮತ್ತು 1,401 ಮಂದಿ ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 15,60,542 ಮಂದಿಗೆ ಲಸಿಕೆ ಹಾಕಲಾಗಿದೆ.

2 ಪ್ರಕರಣ ಪತ್ತೆ: ಜಿಲ್ಲೆಯಲ್ಲಿ ಬುಧವಾರ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿಯಲ್ಲಿ ತಲಾ 1 ಪ್ರಕರಣಗಳು ದೃಢಪಟ್ಟಿದ್ದು ಪ್ರಸ್ತುತ 11 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೂ ಪತ್ತೆಯಾದ 43,986 ಮಂದಿ ಸೋಂಕಿತರ ಪೈಕಿ 43,545 ಮಂದಿಗೆ ಗುಣವಾಗಿದ್ದು 431 ಮಂದಿ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net