

ಮಡಿಕೇರಿ:
ಕುಶಾಲನಗರ ತಾಲೂಕು ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಶಾಲೆಯ ಇಕೋ ಕ್ಲಬ್, ವಿಜ್ಞಾನ ಸಂಘ, ಎನ್.ಎಸ್.ಎಸ್.ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ, ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಕುಶಾಲನಗರ ತಾಲೂಕು ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಣೆ ವಿರೋಧಿ ದಿನ ಆಚರಿಸಲಾಯಿತು. ಇದೇ ಸಂದರ್ಭ ವಿದ್ಯಾರ್ಥಿಗಳು ಮಾದಕ ವಸ್ತುಗಳನ್ನು ಸೇವಿಸುವುದಿಲ್ಲ ಮತ್ತು ಈ ಬಗ್ಗೆ ಸಮುದಾಯದಲ್ಲಿ ಜನಜಾಗೃತಿ ಮೂಡಿಸುವುದಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಣೆ ವಿರೋಧಿ ದಿನದ ಮಹತ್ವ ಕುರಿತು ಮಾಹಿತಿ ನೀಡಿದ ಸಮಾಜ ವಿಜ್ಞಾನ ಸಂಘದ ಉಸ್ತುವಾರಿ ಶಿಕ್ಷಕಿ ಎಸ್.ಎಂ.ಗೀತಾ ಮಾತನಾಡಿ, ಯುವಕರು ವಿವಿಧ ಕಾರಣಗಳಿಂದ ಮಾದಕ ದ್ರವ್ಯದ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಮಾದಕ ದ್ರವ್ಯಗಳ ಪಿಡುಗು ಸಮಾಜದಲ್ಲಿ ಆಳವಾಗಿ ಬೇರೂರಿದೆ. ಇದರಿಂದಾಗಿ ಬಹುತೇಕ ಇಡೀ ಪೀಳಿಗೆ ವಿನಾಶದತ್ತ ಸಾಗುತ್ತಿದೆ. ಮಾದಕ ವ್ಯಸನ ಮತ್ತು ದುರುಪಯೋಗದ ಹಿಡಿತದಿಂದ ಯುವ ಸಮುದಾಯ ಹಾಗೂ ಜನರನ್ನು ರಕ್ಷಿಸಲು, ಮಾದಕ ವ್ಯಸನ ಮತ್ತು ಅಕ್ರಮ ಸಾಗಣೆ ವಿರುದ್ಧ ಅರಿವು ಮೂಡಿಸುವ ದೃಷ್ಟಿಯಿಂದ ಪ್ರತಿ ವರ್ಷ ಜೂ. ೨೬ರಂದು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಣೆ ವಿರೋಧಿ ದಿನ ವಿಶ್ವದಾದ್ಯಂತ ಆಚರಿಸಲಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಮಾದಕ ದ್ರವ್ಯಗಳ ಬಳಕೆ ಮತ್ತು ಕಳ್ಳ ಸಾಗಣೆ ಸಮಾಜದಲ್ಲಿ ದೊಡ್ಡ ಪಿಡುಗಾಗಿದೆ. ಇವುಗಳ ದೀರ್ಘಾವಧಿಯ ಬಳಕೆಯಿಂದ ಕಳಪೆ ಆರೋಗ್ಯ, ಮಾನಸಿಕ ಅಸ್ವಸ್ಥತೆ ಹಾಗೂ ಸಾವಿಗೂ ಕಾರಣವಾಗುತ್ತದೆ. ಭಾರತವನ್ನು ಮಾದಕ ವ್ಯಸನ ಮತ್ತು ವ್ಯಸನದಿಂದ ಮುಕ್ತಗೊಳಿಸುವುದಾಗಿದೇ ಈ ದಿನವನ್ನು ಆಚರಿಸುವ ಉದ್ದೇಶವಾಗಿದೆ ಎಂದರು.
ವಿಜ್ಞಾನ ಸಂಘದ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ, ಮಾದಕ ವ್ಯಸನದಿಂದ ಮುಕ್ತರಾಗುವ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ವಿ.ಎಂ.ನವೀನ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು ಎಂದರು.
ಶಾಲೆಯ ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ.ದಯಾನAದ ಪ್ರಕಾಶ್, ಬಿ.ಎನ್.ಸುಜಾತ, ಅನ್ಸಿಲಾ ರೇಖಾ, ಕೆ.ಟಿ.ಸೌಮ್ಯ, ಸಿಬ್ಬಂದಿ ಎಂ.ಉಷಾ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.