

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಕೊಲ್ಲಮೊಗ್ರು ಗ್ರಾ.ಪಂ.ವ್ಯಾಪ್ತಿಯಲ್ಲಿ ಡೆಂಘೆ ಪ್ರಕರಣ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಡೆಂಘೆ ಹರಡುವಿಕೆ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಜಾಗೃತಿ ಸಭೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಳ್ಯ ವತಿಯಿಂದ ಕೊಲ್ಲಮೊಗ್ರು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೀಳಾ ಮಾತನಾಡಿ, ಮಳೆಗಾಲ ಸಂದರ್ಭ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ವಹಿಸಬೇಕು. ನಮ್ಮ ಸುತ್ತ ಮುತ್ತ ಸೊಳ್ಳೆ ಉತ್ಪತ್ತಿ ಆಗುವಂತೆ ನೀರು ನಿಲ್ಲಲು ಬಿಡಬಾರದು. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಪಡಿಸಬೇಕು ಎಂದ ಅವರು ಜ್ವರ ಬಂದ ಸಂದರ್ಭ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುವಂತೆ ತಿಳಿಸಿದರು. ಡೆಂಘೆ ಹರಡುವಿಕೆ ತಡೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ಸಲಹೆ-ಸೂಚನೆಗಳನ್ನು ನೀಡಲಾಯಿತು.
ತಂಡ ರಚನೆ: ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯನ್ನು ಒಳಗೊಂಡಂತೆ ಪ್ರಮುಖರ ತಂಡ ರಚಿಸಲಾಯಿತು. ಈ ತಂಡಮನೆ ಮನೆ ಭೇಟಿ ನಡೆಸಿ ಲಾರ್ವಾ ಸರ್ವೇ ನಡೆಸುವುದು ಹಾಗೂ ಸೊಳ್ಳೆ ಉತ್ಪತ್ತಿ ತಾಣ ನಾಶ ಪಡಿಸುವ ಹಾಗೂ ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ವಹಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಕೊಲ್ಲಮೊಗ್ರು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕುಲದೀಪ್, ಗ್ರಾ.ಪಂ.ಅಧ್ಯಕ್ಷೆ ಜಯಶ್ರೀ ಚಾಂತಾಳ, ಸದಸ್ಯರಾದ ಮೋಹಿನಿ ಕಟ್ಟ, ಪುಷ್ಪರಾಜ್ ಪಡ್ಪು, ಆರೋಗ್ಯ ಇಲಾಖೆಯ ತಾಲೂಕು ಎಲ್‌ಎಚ್‌ವಿ ತಿರುಮಲೇಶ್ವರಿ, ಆರೋಗ್ಯ ನಿರೀಕ್ಷಣಾಧಿಕಾರಿ ಗುರುಪ್ರಸಾದ್, ಆಶಾ ಮೆಂಟರ್ ಧನ್ಯಾ, ಉಪಕೇಂದ್ರದ ಆರೋಗ್ಯ ಸಹಾಯಕಿ ಕುಸುಮಾವತಿ, ಸಮುದಾಯ ಆರೋಗ್ಯಾಧಿಕಾರಿ ರಾಜೇಶ್, ಆಶಾ ಕಾರ್ಯಕರ್ತೆಯರಾದ ಶೇಷಮ್ಮ, ತೇಜಾವತಿ, ಸುಮತಿ, ಸಂಜೀವಿನಿ ಸಂಘದ ಎಂಬಿಕೆ ವಿಮಲಾಕ್ಷಿ, ಎಲ್‌ಸಿಆರ್‌ಪಿ ನೀಲಾವತಿ, ಧರ್ಮಸ್ಥಳ ಯೋಜನೆಯ ಸೇವಾಪ್ರತಿನಿಧಿಗಳಾದ ಸಾವಿತ್ರಿ, ಶೋಭಾ ಸೇರಿದಂತೆ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು. ಗುರುಪ್ರಸಾದ್ ಸ್ವಾಗತಿಸಿ, ವಂದಿಸಿದರು.