ಮುತುವರ್ಜಿ ವಹಿಸದಿದ್ದರೆ ಹರಡಲಿದೆ ರೋಗ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

11_08_Mdy_04(Denge Jagruthi)
Published on

ಮಂಡ್ಯ: ಜನರು ಸೊಳ್ಳೆಗಳ ನಿಯಂತ್ರಣದಲ್ಲಿ ಮುತುವರ್ಜಿ ವಹಿಸದಿದ್ದರೆ, ಸೊಳ್ಳೆಗಳ ನಿಯಂತ್ರಣ ಅಸಾಧ್ಯವಾಗುತ್ತದೆ. ಮಾತ್ರವಲ್ಲದೆ ರೋಗಗಳ ಹರಡುವಿಕೆಯೂ ಹೆಚ್ಚಾಗಲಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ರಾಷ್ಟ್ರೀಯ ಡೆಂಘೆ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸೊಳ್ಳೆಗಳ ನಿಯಂತ್ರಣದಲ್ಲಿ ಜನರ ಪಾತ್ರ ಅತಿ ಮುಖ್ಯವಾಗಿದೆ ಎಂದರು.

ಸೊಳ್ಳೆಗಳ ನಿಯಂತ್ರಣಕ್ಕೆ ಜನರಲ್ಲಿ ಜಾಗೃತಿ ಮೂಡಬೇಕು. ಮನೆಯ ಅಕ್ಕಪಕ್ಕದಲ್ಲಿ ನೀರು ನಿಲ್ಲದಿರುವಂತೆ ನೋಡಿಕೊಂಡಾಗ ಸೊಳ್ಳೆ ಉತ್ಪತ್ತಿಯಾಗಲ್ಲ. ಜನರು ಕೂಡ ಆಡಳಿತ ವರ್ಗದವರ ಜತೆ ಕೈಜೋಡಿಸಬೇಕು. ಆಗ ಮಾತ್ರ ಮಂಡ್ಯವನ್ನು ಶೂನ್ಯ ಡೆಂಘೆ ನಿಯಂತ್ರಣ ಮಾಡಬಹುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಸೊಳ್ಳೆಗಳ ಜೀವನ ಚಕ್ರವಾದ ಲಾರ್ವಾ ಉತ್ಪತ್ತಿಯಾಗುವ ಸ್ಥಳಗಳನ್ನು ಗುರುತಿಸುವ ಕಾರ್ಯ ನಿರಂತರವಾಗಿ ನಡೆಯುತ್ತದೆ. ಲಾರ್ವಾ ಉತ್ಪತ್ತಿಯಾಗುವ ಸ್ಥಳಗಳಲ್ಲಿ ಜಾಗೃತಿ ಮೂಡಿಸಿ ಜನರಲ್ಲಿ ಅರಿವು ಮೂಡಿಸಲಾಗುವುದು. ಜಿಲ್ಲೆಯಲ್ಲಿ 78 ಡೆಂಘೆ ಪ್ರಕರಣಗಳು ಇದ್ದು, ಇದು ರಾಜ್ಯ ಸರಾಸರಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಮಂಡ್ಯ ಜಿಲ್ಲೆ ಇದೆ. ಸಂಪೂರ್ಣವಾಗಿ ಡೆಂಘೆ ಮುಕ್ತವಾಗಿ ಮಾಡಬೇಕಿದ್ದು, ಇದಕ್ಕೆ ಸಾರ್ವಜನಿಕ ಸಹಕಾರ ಮುಖ್ಯ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಮಾತನಾಡಿ, ಡೆಂಘೆ ನಿಯಂತ್ರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ತಿಂಗಳಿನಲ್ಲಿ ಎರಡು ದಿನ ಮೊದಲನೇ ಶುಕ್ರವಾರ ಮತ್ತು ಎರಡನೇ ಶುಕ್ರವಾರ ನಗರದಲ್ಲಿ ಲಾರ್ವಾ ಸರ್ವೆ ನಡೆಯಲಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಜನರು ಸ್ವಯಂ ರಕ್ಷಣಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ವಿವರಿಸಿದರು.

ಜಯಚಾಮರಾಜೇಂದ್ರ ಹೊರಟ ಜಾಗೃತಿ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಎದುರು ಮುಕ್ತಾಯವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net