ವಿವಿಧ ಬೇಡಿಕೆ ಈಡೇರಿಕೆಗೆ ವಿಶೇಷ ಚೇತನರಿಂದ ಜಾಗೃತಿ ಜಾಥಾ

03MYS601 KOTEANJANEYA
Published on

ಮೈಸೂರು: ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿಶ್ವ ವಿಶೇಷ ಚೇತನರ ದಿನಾಚರಣೆ ಅಂಗವಾಗಿ ವಿಶೇಷ ಚೇತನರ ಹಕ್ಕುಗಳ ಹೋರಾಟ ಸಮಿತಿಯಿಂದ ಭಾನುವಾರ ಅರಿವು ಜಾಗೃತಿ ಜಾಥಾ ನಡೆಸಲಾಯಿತು.
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ತ್ರಿಚಕ್ರ ಗಾಡಿಗಳೊಂದಿಗೆ ಹೊರಟು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕರ್ನಾಟಕ ವಸ್ತುಪ್ರದರ್ಶನ ಆವರಣಕ್ಕೆ ತಲುಪಿದರು. ತ್ರಿಚಕ್ರ ವಾಹನಗಳಲ್ಲಿ ಭಿತ್ತಿಫಲಕಗಳನ್ನು ಪ್ರದರ್ಶಿಸಿ ಸಾರ್ವಜನಿಕರ ಗಮನ ಸೆಳೆದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೂರು ತಿಂಗಳಿಗೆ ಒಮ್ಮೆ ಕುಂದುಕೊರತೆ ಸಭೆ ಕಡ್ಡಾಯವಾಗಿ ನಡೆಸಿ ಅಂಗವಿಕಲರ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಬೇಕು, ಅಂಗವಿಕಲರಿಗೆ ಮನೆ, ನಿವೇಶನ ನೀಡುವ ಸಂಬಂಧ ನೀಡಿದ ಮನವಿ ಮನವಿಯಾಗಿಯೇ ಉಳಿದಿದ್ದು, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿ ರ‌್ಯಾಂಪ್ ನಿರ್ಮಾಣ ಮಾಡಿ ಲಿಫ್ಟ್ ಸೌಲಭ್ಯ ಒದಗಿಸಬೇಕು, ನಗರಪಾಲಿಕೆ, ಡಿಸಿ ಕಚೇರಿಗಳಲ್ಲಿ ಸಮಸ್ಯೆಗಳನ್ನು ಆಲಿಸಲು ಸಲಹಾ ಕೊಠಡಿಗಳನ್ನು ನೆಲಮಾಳಿಗೆಯಲ್ಲೇ ಇರುವಂತೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಶೇ.5 ಅನುದಾನವನ್ನು ಕಡ್ಡಾಯವಾಗಿ ಅಂಗವಿಕಲರಿಗೇ ಬಳಸಬೇಕು. ನಗರಪಾಲಿಕೆಯಲ್ಲಿ ಬ್ಯಾಂಕ್ ಮೂಲಕ ನೀಡುತ್ತಿರುವ ಸಬ್ಸಿಡಿ ಹಣವನ್ನು ಅರ್ಹರಿಗೆ ನೇರವಾಗಿ ನೀಡಬೇಕು, ಪಾಲಿಕೆಯ ಶೇ.5ರ ಅನುದಾನದಡಿ ನಿವೇಶನ ಖರೀದಿಸಲು ನೀಡುತ್ತಿರುವ ಮೊತ್ತವನ್ನು ಮನೆಗಳನು ್ನಕೊಳ್ಳಲು ಅನುಕೂಲವಾಗುವಂತೆ ಸುತ್ತೋಲೆ ಹೊರಡಿಸಬೇಕು ಎಂದು ಮನವಿ ಮಾಡಿದರು.
ಅಂಗವಿಕಲರು ಸ್ವಾವಲಂಬಿ ಜೀವನ ನಡೆಸಲು ಆಧಾರ ಯೋಜನೆಯಡಿ ಕೆಲವು ಪೆಟ್ಟಿಗೆ ಅಂಗಡಿಗಳನ್ನು ನಡೆಸುತ್ತಿದ್ದು, ಹಲವು ವರ್ಷಗಳಿಂದ ಜೀವನ ನಡೆಸುತ್ತಿದ್ದಾರೆ. ಆದರೆ ಕೆಲವು ವಲಯ ಕಚೇರಿ ಅಧಿಕಾರಿಗಳು ಬಂಡವಾಳಶಾಹಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಕೂಡಲೇ ಕ್ರಮವಹಿಸಬೇಕು ಎಂದು ಕೋರಿದರು.
ಜಿಲ್ಲಾ ಪುನರ್ವಸತಿ ಕೇಂದ್ರದ ಸಂಪೂರ್ಣ ಜವಾಬ್ದಾರಿಯನ್ನು ನೇರವಾಗಿ ರಾಜ್ಯ ಸರ್ಕಾರವೇ ವಹಿಸಿಕೊಳ್ಳಬೇಕು, ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ಸರ್ಕಾರದ ಸವಲತ್ತು ನೇರವಾಗಿ ಅಂಗವಿಕಲರಿಗೆ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಲಾಯಿತು.
ವಿಶೇಷಚೇತನರ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಎಂ.ಗಿರೀಶ, ಗೌರವಾಧ್ಯಕ್ಷ ನರಸಿಂಹೇಗೌಡ, ಸಂಚಾಲಕ ಪ್ರಭುಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾದ ಸುಜಾತಾ, ಚಂದ್ರಕುಮಾರ್, ನಿರ್ದೇಶಕರಾದ ಚೌಡಯ್ಯ, ಶಿಹಾಬುದ್ದೀನ್, ರಹಮತ್, ಮಹದೇವಸ್ವಾಮಿ, ವೆಂಕೋಬರಾವ್, ಜಗದೀಶ್,ಶರಣಯ್ಯ, ಸಂತೋಷ್ ಕುಮಾರ್, ಕಿರಣಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net