ಆನೆ-ಮಾನವ ಸಂಘರ್ಷ ತಡೆಗೆ ಜಾಗೃತಿ ಅಗತ್ಯ: ಮೇಜರ್ ಪ್ರೊ.ಬಿ.ರಾಘವ

Z BOOK
Published on

ಮಡಿಕೇರಿ: ಇತ್ತೀಚಿನ ವರ್ಷಗಳಲ್ಲಿ ಆನೆ ಮಾನವ ಸಂಘರ್ಷ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಯುವ ಸಮೂಹದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್‌ನ ಪ್ರಾಂಶುಪಾಲರಾದ ಮೇಜರ್ ಪ್ರೊ.ಬಿ.ರಾಘವ ಅಭಿಪ್ರಾಯಪಟ್ಟರು.

ಕೊಡವ ಮಕ್ಕಡ ಕೂಟದ ಸ್ಥಾಪಕಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಜನ್ಮದಿನದ ಅಂಗವಾಗಿ ನಗರದ ಪತ್ರಿಕಾ ಭವನದಲ್ಲಿ ಕೂಟದ ೧೧೭ನೇ ಪುಸ್ತಕ, ಬರಹಗಾರ್ತಿ ಚೀಯಕಪೂವಂಡ ಶ್ವೇತನ್ ಚಂಗಪ್ಪ ಅವರು ರಚಿಸಿರುವ ಕೊಡಗ್‌ಲ್ ಆನೆ-ಮಾಲವ ಪಣಂಗಲ್‌ನ್ನು ಭಾನುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಆನೆ ಮಾನವ ಸಂಘರ್ಷದಿಂದ ಕೇವಲ ಮಾನವನಿಗೆ ಮಾತ್ರ ಹಾನಿಯಾಗುತ್ತಿಲ್ಲ, ಆನೆಗಳಿಗೂ ಹಾನಿಯಾಗುತ್ತಿದೆ. ಸಮಸ್ಯೆಯ ಗಂಭೀರತೆ ಮತ್ತು ಕಾರಣಗಳ ಕುರಿತು ಯುವ ಸಮೂಹದಲ್ಲಿ ಜಾಗೃತಿ ಮೂಡಿಸಬೇಕು. ಅರಣ್ಯ ನಾಶ, ಟಿಂಬರ್ ಲಾಬಿ, ಆಹಾರದ ಕೊರತೆ, ಮಾನವನ ಅತಿಕ್ರಮಣ, ಮಿತಿ ಮೀರುತ್ತಿರುವ ಪ್ರವಾಸಿಗರ ಸಂಖ್ಯೆ, ಅತಿಯಾದ ತ್ಯಾಜ್ಯ ಎಂಬಿತ್ಯಾದಿ ವಿಚಾರಗಳು ಕಾಡಾನೆಗಳ ದಾಳಿಗೆ ಕಾರಣವಾಗುತ್ತಿದೆಯೇ ಎನ್ನುವ ಕುರಿತು ಚಿಂತನೆ ನಡೆಯಬೇಕು. ಯುವ ಸಮೂಹ ಈ ನಿಟ್ಟಿನಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು, ಪರಿಸರ ಮತ್ತು ಪ್ರಾಣಿಗಳ ಬಗ್ಗೆ ಕಾಳಜಿ ತೋರಬೇಕು ಎಂದು ಕರೆ ನೀಡಿದರು.

ಕೊಡಗ್‌ಲ್ ಆನೆ-ಮಾಲವ ಪಣಂಗಲ್ ಪುಸ್ತಕದಲ್ಲಿ ಆನೆ ಮತ್ತು ಮಾನವನ ಸಂಬಂಧ, ಮಾವುತನೊಂದಿಗಿನ ಒಡನಾಟ ಮತ್ತಿತರ ಪರಿಸರ ಸ್ನೇಹಿ ವಿಚಾರಗಳನ್ನು ಸುಂದರವಾಗಿ ವಿವರಿಸಿದ್ದಾರೆ. ಅರಸರು ಹಾಗೂ ಬ್ರಿಟಿಷರ ಕಾಲದಿಂದಲೂ ಆನೆಗಳು ಮಾನವನಿಗೆ ಎಷ್ಟು ಉಪಯುಕ್ತ ಎನ್ನುವುದನ್ನು ವಿಶ್ಲೇಷಿಸಿದ್ದಾರೆ. ಇದೊಂದು ಅತ್ಯುತ್ತಮ ಪುಸ್ತಕ ಎಂದು ಶ್ಲಾಘಿಸಿದರು.

ಫೀ.ಮಾ.ಕಾರ್ಯಪ್ಪ ಕಾಲೇಜ್‌ನಲ್ಲಿ ಕೊಡವ ಎಂ.ಎ ಪದವಿ ಪಡೆದ ೯ ವಿದ್ಯಾರ್ಥಿಗಳು ಸಾಹಿತಿಗಳಾಗಿ ಮಾರ್ಪಟ್ಟಿದ್ದಾರೆ. ಅಲ್ಲದೆ ಅಧ್ಯಯನ ಕೃತಿಗಳನ್ನು ರಚಿಸಿದ್ದಾರೆ. ಈ ಪದವಿ ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರಗಳ ಬೆಳವಣಿಗೆಗೆ ಪೂರಕವಾಗಿದೆ. ಕಾಲೇಜ್‌ನ ಜವಾಬ್ದಾರಿ ಹೆಚ್ಚಾಗಿದ್ದು, ಕೊಡವ ಎಂ.ಎ ಗೆ ಮತ್ತು ಕೊಡಗು ವಿವಿ ಗೆ ನಾಗರೀಕರ ಸಹಕಾರ ಅಗತ್ಯ ಎಂದು ಪ್ರೊ.ಬಿ.ರಾಘವ ಹೇಳಿದರು.

ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಮಾತನಾಡಿ, ಓದುಗರು ಪುಸ್ತಕಗಳನ್ನು ಓದಿದರೆ ಸಾಲದು, ಅದರಲ್ಲಿರುವ ಸರಿ ತಪ್ಪುಗಳನ್ನು ವಿಶ್ಲೇಷಣೆ ಮಾಡಬೇಕು ಮತ್ತು ಬರಹಗಾರರ ಗಮನಕ್ಕೆ ತರಬೇಕು. ಈ ರೀತಿ ಮಾಡುವುದರಿಂದ ಬರಹಗಾರರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಬರಹಗಾರರಿಗೆ ಪ್ರೋತ್ಸಾಹ ನೀಡಿದಂತ್ತಾಗುತ್ತದೆ ಎಂದರು.

ಪುಸ್ತಕಗಳನ್ನು ಮುದ್ರಣಕ್ಕೆ ನೀಡುವ ಮೊದಲು ಅಕ್ಷರದಲ್ಲಿನ ತಪ್ಪುಗಳನ್ನು ಪರಿಗಣಿಸಬೇಕು. ಯಾವುದೇ ವಿಷಯಕ್ಕೆ ದಕ್ಕೆಯಾಗದಂತೆ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಕೊಡಗ್‌ಲ್ ಆನೆ-ಮಾಲವ ಪಣಂಗಲ್ ಪುಸ್ತಕವನ್ನು ಪರಿಸರ ಪ್ರೇಮಿಗಳು, ಪ್ರಾಣಿ ಪ್ರಿಯರು ಓದಲೇಬೇಕು. ಇದೊಂದು ಸಂಶೋಧನಾತ್ಮಕ ಪುಸ್ತಕವಾಗಿದ್ದು, ಆನೆಯ ವಿಚಾರವನ್ನು ಬರಹಗಾರರು ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಲಾಗಿದೆ. ಕೊಡವ ಮಕ್ಕಡ ಕೂಟ ಸಂಘಟನೆ ಅತ್ಯಂತ ಕಡಿಮೆ ಅವಧಿಯಲ್ಲಿ ೧೧೭ ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಪರಿಶ್ರಮ ಶ್ಲಾಘನೀಯವಾದದ್ದು ಎಂದು ಬಾಚರಣಿಯಂಡ ಪಿ.ಅಪ್ಪಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡಗ್‌ಲ್ ಆನೆ-ಮಾಲವ ಪಣಂಗಲ್ ಕೊಡವ ಪುಸ್ತಕದ ಬರಹಗಾರ್ತಿ ಚೀಯಕಪೂವಂಡ ಶ್ವೇತನ್ ಚಂಗಪ್ಪ ಮಾತನಾಡಿ, ಕಾಡಾನೆಗಳು ನಾಡಿಗೆ ಬರುತ್ತಿವೆ ಎನ್ನುವ ಮಾತು ತಪ್ಪು. ಆನೆಗಳ ಜಾಗ ಮತ್ತು ಮಾರ್ಗವನ್ನು ಮಾನವನೇ ಅತಿಕ್ರಮಣ ಮಾಡಿಕೊಂಡಿದ್ದಾನೆ. ಆನೆ ಮಾನವನ ನಡುವಿನ ಸಂಘರ್ಷದಲ್ಲಿ ಮಾನವನಿಗೇ ಮಾತ್ರ ಹಾನಿಯಾಗುತ್ತಿಲ್ಲ, ಆನೆಗಳಿಗೂ ಹಾನಿಯಾಗುತ್ತಿದೆ. ಮಾನವನ ತಪ್ಪಿನಿಂದ ಆನೆಗಳು ಜೀವವನ್ನು ಕಳೆದುಕೊಳ್ಳುತ್ತಿವೆ ಎಂದರು.

ಮುಖ್ಯವಾಗಿ ಆನೆ ಮಾನವ ಸಂಘರ್ಷ ತಡೆಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ತೋಟಗಳಲ್ಲಿ ಜೇನು ಕೃಷಿ ಮಾಡಿದರೆ ಆನೆಗಳು ಬರುವುದಿಲ್ಲವೆಂದು ಅಧ್ಯಯನ ಹೇಳುತ್ತದೆ. ಬೆಳೆಗಾರರು ಈ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದು ಶ್ವೇತನ್ ಚಂಗಪ್ಪ ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಇಂದು ಪರಿಸರ ದುರ್ಬಳಕೆಯಾಗುತ್ತಿದ್ದು, ಮಾನವನ ದುರಾಸೆಯೇ ಕಾಡಾನೆ ದಾಳಿಗೆ ಕಾರಣ ಎಂದು ಅಭಿಪ್ರಾಯಪಟ್ಟ ಅವರು, ಹಿಂದೆ ಕೊಡಗಿನಲ್ಲಿ ದೇವರಕಾಡು, ಗೋಮಾಳಗಳ ಮೂಲಕ ಕಾಡುಗಳನ್ನು ರಕ್ಷಿಸಲಾಗುತ್ತಿತ್ತು. ಕಕ್ಕಡ, ಕೈಲ್ ಪೊಳ್ದ್, ಪುತ್ತರಿ, ಕಾವೇರಿ ತೀರ್ಥೋದ್ಭವ ಸೇರಿದಂತೆ ಕೊಡಗಿನ ಹಬ್ಬಗಳೆಲ್ಲವೂ ಪರಿಸರಕ್ಕೆ ಪೂರಕವಾಗಿದೆ ಮತ್ತು ಪರಿಸರ ಭಕ್ತಿಯಿಂದ ಕೂಡಿದೆ. ಇದರ ಹಿಂದೆ ಪರಿಸರವನ್ನು ಪೂಜಿಸಿ, ಉಳಿಸುವ ಪರಿಕಲ್ಪನೆ ಇದೆ. ಹಿರಿಯರು ಪರಿಸರವನ್ನು ಪೂಜಿಸುತ್ತಿದ್ದರು. ಆದರೆ ಇಂದು ಮಾನವನ ದುರಾಸೆ ಹೆಚ್ಚಾಗಿದೆ. ಪರಿಸರದ ಮೇಲೆ ಆಕ್ರಮಣವಾಗುತ್ತಿದೆ. ರೆಸಾರ್ಟ್, ಹೋಂಸ್ಟೇ, ಲೇಔಟ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮನುಷ್ಯ ಮಾಡುತ್ತಿರುವ ತಪ್ಪಿನಿಂದಲೇ ಕಾಡಾನೆಗಳ ದಾಳಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜ್ಞಾನೋದಯ ಶಾಲೆಯ ಸಂಯೋಜಕರು ಹಾಗೂ ಬೆಳೆಗಾರರಾದ ಚೀಯಕಪೂವಂಡ ಮಿಥುನ್ ಚಂಗಪ್ಪ ಮಾತನಾಡಿ, ರೈತರು ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷದಿಂದ ಅಪಾರ ಬೆಳೆನಷ್ಟ ಮತ್ತು ಜೀವಹಾನಿಯಾಗುತ್ತಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಚೀಯಕಪೂವಂಡ ಶ್ವೇತನ್ ಚಂಗಪ್ಪ ಅವರು ಅರಣ್ಯ ಇಲಾಖೆಯೊಂದಿಗೆ ಸಮಾಲೋಚಿಸಿ ಪುಸ್ತಕವನ್ನು ರಚಿಸಿದ್ದಾರೆ ಎಂದರು.

ಪಟ್ಟಣ ಸಹಕಾರ ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪಕರಾದ ಇಟ್ಟಿರ ಸರೋಜಿನಿ ಪೂವಯ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net