ಜನರಲ್ಲಿ ಆರೋಗ್ಯ ಜ್ಞಾನ ಹೆಚ್ಚಲು ಜಾಗೃತಿ ಅಗತ್ಯ: ಡಾ.ಸಿ.ಆರ್ ಚಂದ್ರಶೇಖರ್

nagesh
Published on

ಬೆಂಗಳೂರು: ಜಗತ್ತಿನ ಹಲವು ವಿಜ್ಞಾನಗಳಿಗಿಂತ ಆರೋಗ್ಯ ವಿಜ್ಞಾನ ಬಹಳ ಮುಖ್ಯವಾಗಿದ್ದು, ಅದರ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯಾಧ್ಯಕ್ಷ ಡಾ ಸಿ.ಆರ್.ಚಂದ್ರಶೇಖರ್ ತಿಳಿಸಿದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ನಗರ ಜಿಲ್ಲಾ ಶಾಖೆ ಕಸಾಪ ಆವರಣದ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರಿಗೆ ಹೊಣೆಗಾರಿಕೆ ಪತ್ರ ನೀಡುವ ಸಮಾರಂಭದಲ್ಲಿ ಮಾತನಾಡಿದರು.

ಮನುಷ್ಯರು ಶೇ.80 ರಷ್ಟು ಕಾಯಿಲೆಗಳನ್ನು ತಾವಾಗಿಯೇ ತಂದುಕೊಳ್ಳುತ್ತಿದ್ದಾರೆ. ಕಲುಷಿತ ಆಹಾರ, ಕೆಟ್ಟ ಪರಿಸರ, ಮಾನಸಿಕ ಒತ್ತಡಗಳು ನಮಗೆ ವಿವಿಧ ರೀತಿಯ ರೋಗವನ್ನುಂಟು ಮಾಡುತ್ತಿವೆ. ಆದ್ದರಿಂದ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಲು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು.ಎಂದು ಹೇಳಿದ ಅವರು, ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷತೆ ಹೊಣೆಗಾರಿಕೆ ತೆಗೆದುಕೊಂಡಿರುವವರು ಮೊದಲು ಜ್ಞಾನಿಗಳಾಗಬೇಕು, ಇದಕ್ಕಾಗಿ ಸತತ ಅಧ್ಯಯನ ಮಾಡಿದರೆ ಮಾತ್ರ ಮೌಢ್ಯಾಚರಣೆಗಳು ಹಾಗೂ ಮೋಸ ಮಾಡುವವರಿಂದ ದೂರ ಇರಲು ಸಾಧ್ಯ ಎಂದು ಹೇಳಿದರು.

ಕಸಾಪ ಕೋಶಾಧ್ಯಕ್ಷ ಪಟೇಲ್ ಪಾಂಡು ಮಾತನಾಡಿ ಸದ್ಯ ಹೊಣೆಗಾರಿಕೆ ವಹಿಸಿಕೊಂಡವರು ಕ್ರಿಯಾಶೀಲರಾಗಿ ಕೆಲಸ ಮಾಡುವ ಮೂಲಕ ಆ ಹುದ್ದೆಗೆ ನ್ಯಾಯ ಒದಗಿಸಬೇಕು, ಡಾ. ಸಿ ಆರ್ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯದಾದ್ಯಂತ ಪ್ರಭಲವಾಗಿ ಬೆಳೆಯಲಿ, ಅದಕ್ಕೆ ಕಸಾಪ ಸಹಕಾರ ಸದಾ ಇರುತ್ತದೆ ಎಂದು ಆಶೆಯ ವ್ಯಕ್ತಪಡಿಸಿದರು.

ಜ್ಞಾನ ವಿಜ್ಞಾನ ಸಮಿತಿಯ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ನಾ. ಶ್ರೀಧರ್ ಮಾತನಾಡಿ ಬೆಂಗಳೂರು ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ರಾಜಧಾನಿಯಾಗಿದ್ದು ಎಲ್ಲ 28 ವಿದಾನಸಭಾ ಕ್ಷೇತ್ರಗಳಲ್ಲಿ ಸಮಿತಿಯನ್ನು ಬಲಪಡಿಸಲಾಗುವುದು ಎಂದರು. ನಂತರ 28 ವಿದಾಸಭಾ ಕ್ಷೇತ್ರಗಳ ಅಧ್ಯಕ್ಷರು ಹೊಣೆಗಾರಿಕೆ ಪತ್ರ ಸ್ವೀಕರಿಸಿದರು. ಇದೇ ವೇಳೆ ಜಾಗೃತಿ ಟ್ರಸ್ಟ್ ಅಧ್ಯಕ್ಷ ಬಿ.ನಾಗೇಶ್ ಅವರನ್ನು ಸನ್ಮಾನಿಸಲಾಯಿತು.

ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಎಂ. ಲಕ್ಷ್ಮೀನರಸಿಂಹ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಕಾರ್ಯದರ್ಶಿ ಈ. ಬಸವರಾಜು,ಕಸಾಪ ಗೌ. ಕಾರ್ಯದರ್ಶಿ ನೆ.ಭ.ರಾಮಲಿಂಗಾಶೆಟ್ಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net