

ಹುಬ್ಬಳ್ಳಿ: ರಕ್ತ ದಾನ ಮಾಡಿದರೆ ಅನಾರೋಗ್ಯವಾಗಲಿದೆ ಎಂಬ ಭೀತಿ ಕೆಲವರಲ್ಲಿದೆ. ಇನ್ನೂ ಕೆಲವರಿಗೆ ಈ ಕುರಿತು ಅರಿವಿಲ್ಲ. ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಆರ್‌ಎಸ್‌ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.
ಇಲ್ಲಿಯ ಮೂರುಸಾವಿರ ಮಠದಲ್ಲಿ ಕರ್ನಾಟಕ ಬ್ಯಾಂಕ್‌ನ ಸಿಎಸ್‌ಆರ್ ನಿಧಿಯಡಿ ರಕ್ತ ಸಂಗ್ರಹಣೆಗಾಗಿ ದೇಣಿಗೆ ನೀಡಿದ ಸುಸಜ್ಜಿತ ರಕ್ತ ಸಂಗ್ರಹಣೆ ವಾಹನದ ಲೋಕಾರ್ಪಣೆ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.
ಬಡವರು ಮತ್ತು ಜನಸಾಮಾನ್ಯರಿಗೆ ಅಗತ್ಯಬಿದ್ದಾಗ ರಕ್ತವನ್ನು ರಾಷ್ಟ್ರೋತ್ಥಾನ ರಕ್ತ ಕೇಂದ್ರದರು ನೀಡುತ್ತಿದ್ದಾರೆ. ಅದೂ ಕಡಿಮೆ ದರದಲ್ಲಿ ಕೊಡುತ್ತಿದ್ದಾರೆ. ಈಗಾಗಲೇ 77 ಸಾವಿರ ಜನರಿಗೆ ಜೀವದಾನ ಮಾಡಿದೆ. ಸಮಾಜ ಕೊಟ್ಟದ್ದನ್ನು ಸಮಾಜಕ್ಕೆ ಮರಳಿ ಕೊಡುವ ಕೆಲಸವನ್ನು ಮಾಡುತ್ತಿದೆ. ಇದಕ್ಕೆ ಸಮಾಜದ ಬೆಂಬಲ ಇನ್ನಷ್ಟು ಅಗತ್ಯವಿದೆ ಎಂದರು.
ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠ. ರಕ್ತದಾನ ಜೀವ ಉಳಿಸುತ್ತದೆ. ಬೇರೆ ದಾನಗಳನ್ನು ಮಾಡಲು ಮಾರುಕಟ್ಟೆಯಿಂದ ತರಬಹುದು. ಆದರೆ, ರಕ್ತವನ್ನು ಸ್ವಯಂ ಪ್ರೇರಿತವಾಗಿ ದಾನ ಮಾಡಬೇಕು. ಅದೂ ನಮ್ಮ ದೇಹದಿಂದಲೇ ತೆಗೆದು ದಾನ ಮಾಡಬೇಕು. ಇದರಿಂದ ಇನ್ನೊಬ್ಬರ ಪ್ರಾಣ ಉಳಿಯುತ್ತದೆ ಎಂದರು.
ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, 2010ರಲ್ಲಿ ರಾಷ್ಟ್ರೋತ್ಥಾನ ರಕ್ತ ಕೇಂದ್ರವನ್ನು ಆರಂಭಿಸಲಾಯಿತು. 3700 ಯುನಿಟ್ ಇದುವರೆಗೆ ರಕ್ತ ಸಂಗ್ರಹವಾಗಿದೆ ಎಂದು ವಿವರಿಸಿದರು.
ಕರ್ನಾಟಕ ಬ್ಯಾಂಕ್ ಎಜಿಎಂ ಈರಣ್ಣ ನಾಗರಾಳ ಮಾತನಾಡಿದರು.
ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಾದ ಅರುಣಕುಮಾರ ಸೊಂಡೂರ, ಸಂಜೀವ ಗಲಗಲಿ, ಉದ್ಯಮಿ ಕಾರ್ತಿಕ ದೇಸಾಯಿ, ರಾಷ್ಟ್ರೋತ್ಥಾನ ಕೇಂದ್ರದ ಕಟ್ಟಡ ದಾನಿ ವೀರೇಂದ್ರ ಛೇಡಾ, ಹೃದ್ರೋಗ ತಜ್ಞ ಡಾ. ವಿಜಯಕೃಷ್ಣ ಕೋಳೂರ, ಜಗದೀಶ ಹಿರೇಮಠ ಇತರರು ಇದ್ದರು.