

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಶದ ಪ್ರತಿ ರಂಗದಲ್ಲೂ ಇಂದು ಭ್ರಷ್ಟಾಚಾರ ಹಾಸುಹೊಕ್ಕಿದೆ. ಈ ಸಾಮಾಜಿಕ ಪಿಡುಗು ನಿಗ್ರಹಕ್ಕೆ ಜಾಗೃತಿ ಅಗತ್ಯವಿದೆ. ಇದರ ನಿಗ್ರಹಕ್ಕೆ ಯುವ ಶಕ್ತಿ ಲೋಕಾಯುಕ್ತ ಜತೆಗೆ ಕೈ ಜೋಡಿಸಲು ಲೋಕಾಯುಕ್ತ ಇನ್ಸ್ಪೆಕ್ಟರ್ ಪರಮೇಶ್ವರ ಕೌಟಗಿ ಹೇಳಿದರು.
ನಗರದ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಛತ್ರಪತಿ ಶಿವಾಜಿ ಮಹಾರಾಜ ಕಲಾ ವಾಣಿಜ್ಯ ಪದವಿ ಕಾಲೇಜಿನ ಸಭಾಭವನದಲ್ಲಿ ಜಿಲ್ಲಾ ಲೋಕಾಯುಕ್ತ ಕಚೇರಿ ವತಿಯಿಂದ ಮಂಗಳವಾರ ಆಯೋಜಿಸಿದ್ದ "ಭ್ರಷ್ಟಾಚಾರ ನಿಗ್ರಹ ಜಾಗೃತಿ' ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಜಾತಿ ಪ್ರಮಾಣ ಪತ್ರ ಪಡೆಯಲು ವಿದ್ಯಾರ್ಥಿಗಳೇ ಲಂಚ ಕೊಡುವ ದುಸ್ಥಿತಿ ಇದೆ. ಮಾಹಿತಿ ಕೊರತೆ ಇದಕ್ಕೆ ಕಾರಣ. ಕಚೇರಿಗೆ ಅಲೆಯುವುದು ತಪ್ಪಿಸಲು ಆನ್-ಲೈನ್ ಸೇವೆ ಆರಂಭಿಸಿದೆ. ಅಧಿಕಾರಿಗಳಿಗೆ ಹಣ ನೀಡುವ ಬದಲು ತಂತ್ರಜ್ಞಾನ ಸದ್ಭಳಕೆ ಮೂಲಕ ಅಗತ್ಯ ಪ್ರಮಾಣ ಪತ್ರ ಪಡೆಯಲು ಸಲಹೆ ನೀಡಿದರು.
ಯಾವುದೇ ಕಚೇರಿ ಕೆಲಸಕ್ಕೆ ಲಂಚ ಕೇಳಿದ ಅಧಿಕಾರಿಗಳ ಬಗ್ಗೆ ಲೋಕಾಯುಕ್ತ ಠಾಣೆಗೆ ದೂರು ನೀಡಬೇಕು. ಅಲ್ಲದೆ ಸರ್ಕಾರದ ನಿಯಮ ಮೀರಿ ಕೆಲಸ ಮಾಡಲು ಅಧಿಕಾರಿಗಳ ಮೇಲೆ ಒತ್ತಡ ಹಾಕುವುದು, ಸರ್ಕಾರ ಯೋಜನೆ ಹಣ ದುರ್ಬಳಕೆ ಕೂಡ ಅಪರಾಧ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಮನೋಹರ ಮೋರೆ ಮಾತನಾಡಿ, ವಿದ್ಯಾರ್ಥಿ ಹಂತದಲ್ಲಿ ದೇಶದ ಕಾನೂನು ಹಾಗೂ ಕಾಯ್ದೆಗಳ ಬಗ್ಗೆ ಅರಿವು ಹೊಂದಬೇಕು ಎಂದರು.
ಲೋಕಾಯುಕ್ತ ಡಿಎಸ್ಪಿ ರವೀಂದ್ರ ಕುರಬಗಟ್ಟಿ, ಉಪಾಧ್ಯಕ್ಷ ಯಲ್ಲಪ್ಲ ಚವ್ಹಾಣ, ನಿರ್ದೇಶಕ ಶಿವಾಜಿ ಸೂರ್ಯವಂಶಿ, ಪ್ರಾಚಾರ್ಯ ಎಂ.ಎಸ್.ಗಾಣಿಗೇರ, ಮುಖ್ಯ ಶಿಕ್ಷಕರಾದ ಮೀನಾಕ್ಷಿ ಘಾಟಗೆ, ಎ.ಬಿ.ಬಾಬರ, ಸಿ.ಪಿ.ಮಾಳೇಕರ, ಇತರರು ಇದ್ದರು.