ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ ಅವಶ್ಯ

voter id
Published on

ಬೆಳಗಾವಿ: ಸ್ವೀಪ್​ ಚಟುವಟಿಕೆಗಳ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸಬೇಕು ಎಂದು ರಾಜ್ಯ ಸ್ವೀಪ್​ ನೋಡಲ್​ ಅಧಿಕಾರಿ ಪಿ.ಎಸ್​.ವಸದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಸಮಗ್ರ ಪರಿಷ್ಕರಣೆ ಸಿದ್ಧತೆ, ಸ್ವೀಪ್​ ಕಾರ್ಯಕ್ರಮ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಸ್ವೀಪ್​ ಚಟುವಟಿಕೆ ಬಹುಮುಖ್ಯವಾಗಿದೆ ಎಂದರು.

ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಕುರಿತು ಎಲ್ಲ ಹಂತದಲ್ಲಿ ಜನಸಾಮಾನ್ಯರಿಗೆ ಮಾಹಿತಿ ತಿಳಿಯಲು ಬ್ಯಾನರ್​, ಕರ ಪತ್ರ ಹೀಗೆ ವಿವಿಧ ಚಟುವಟಿಕೆಗಳ ಮೂಲಕ ಜನರಿಗೆ ತಲುಪುವಂತೆ ಸ್ವೀಪ್​ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಅತಿ ಮುಖ್ಯವಾಗಿದ್ದು, ಜನರು ಸ್ವಯಂ ಪ್ರೇರಿತವಾಗಿ ಭಾಗವಹಿಸಬೇಕು ಎಂದರು.

ಜಿಲ್ಲಾ ಸ್ವೀಪ್​ ಸಮಿತಿ ಅಧ್ಯಕ್ಷ ರಾಹುಲ ಶಿಂಧೆ ಮಾತನಾಡಿ, ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಸೇರಿ ಚುನಾವಣೆಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನು ಸ್ವೀಪ್​ ಮೂಲಕ ಮಾಡಲಾಗುತ್ತಿದೆ. ಕಳೆದ ಚುನಾವಣೆಗಳಲ್ಲಿ ಮತದಾನ ಪ್ರಮಾಣ ಹೆಚ್ಚಿಸುವಲ್ಲಿ ಸ್ವೀಪ್​ ಪ್ರಮುಖ ಪಾತ್ರ ವಹಿಸಿದೆ. ಶಾಲಾ&ಕಾಲೇಜುಗಳಲ್ಲಿ ಕೂಡ ಜಾಗೃತಿ ಮೂಡಿಸಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ಮಹಾನಗರ ಪಾಲಿಕೆ ಉಪಆಯುಕ್ತೆ ರೇಷ್ಮಾ ತಾಳಿಕೋಟಿ, ಉದಯಕುಮಾರ ತಳವಾರ, ಡಿಡಿಪಿಯು ಎಂ.ಎಂ. ಕಾಂಬಳೆ, ಜಿಲ್ಲಾ ಪಿಯು ನೋಡಲ್​ ಅಧಿಕಾರಿ ಎಂ.ಎ.ಮುಲ್ಲಾ, ಡಿಡಿಪಿಐ ಲೀಲಾವತಿ ಹಿರೇಮಠ, ಡಾ.ಐ.ಪಿ.ಗಡಾದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net