ಎಸ್ಸಿ, ಎಸ್ಟಿ ದೌರ್ಜನ್ಯ ತಡೆಗೆ ಗ್ರಾಮೀಣ ಭಾಗದಲ್ಲಿ ಜಾಗೃತಿ ಅಗತ್ಯ

05 HANUR 1
ಹನೂರಿನಲ್ಲಿ ಪರಿಶಿಷ್ಟ ಜಾತಿ, ಪಂಗಡ ಅಧಿನಿಯಮ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣ ಹಾಗೂ ಕಾರ್ಯಾಗಾರವನ್ನು ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಉದ್ಘಾಟಿಸಿದರು. ಮನೋರಖ್ಖಿತ ಬಂತೇಜಿ, ಬಿ.ಆರ್. ಮಹೇಶ್, ಗುರುಪ್ರಸಾದ್, ಮಮ್ತಾಜ್ ಬಾನು, ದೊಡ್ಡಿಂದುವಾಡಿ ಸಿದ್ದರಾಜು ಇತರರು ಇದ್ದರು.
Published on

ಹನೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಧಿನಿಯಮವನ್ನು ಸಮರ್ಪಕವಾಗಿ ಅನುಷ್ಠಾಗೊಳಿಸಬೇಕಾದರೆ ಗ್ರಾಮೀಣ ಭಾಗದಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್ ಹೇಳಿದರು.

ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ದಲಿತ ಸಂಘರ್ಷ ಸಮಿತಿ ಸಹಯೋಗದಲ್ಲಿ ಪರಿಶಿಷ್ಟ ಜಾತಿ, ಪಂಗಡ ಅಧಿನಿಯಮ ತಿದ್ದುಪಡಿ ಹಾಗೂ ನಾಗರಿಕರ ಹಕ್ಕು ಸಂರಕ್ಷಣಾ ಅಧಿನಿಯಮ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣ ಮತ್ತು ಕಾರ್ಯಾಗಾರದಲ್ಲಿ ಮಾತನಾಡಿದರು.

ಸ್ವಾತಂತ್ರ್ಯ ಭಾರತದಲ್ಲಿ ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಿದ್ದೇವೆ. ಆದರೆ, ಸಾಮಾಜಿಕವಾಗಿ ಹಿಂದುಳಿದಿದ್ದೇವೆ. ಇದರ ಪರಿಣಾಮ ಎಸ್ಸಿ, ಎಸ್ಟಿ ಸಮುದಾಯದ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಸರ್ಕಾರ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ 1989ರಲ್ಲಿ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಸಮಿತಿಗಳನ್ನು ರಚಿಸಲಾಗಿದೆ. ಆದರೂ ದೌರ್ಜನ್ಯಗಳು ಮಾತ್ರ ನಿಂತಿಲ್ಲ. 2022ರಲ್ಲಿ 57 ಸಾವಿರ ಎಸ್ಸಿ ಹಾಗೂ 9 ಸಾವಿರ ಎಸ್ಟಿ ವರ್ಗದ ಜನರ ಮೇಲೆ ದೌರ್ಜನ್ಯವಾಗಿದೆ. ಆದ್ದರಿಂದ ಈ ಅಧಿನಿಯಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಿದ್ದು, ಇದರ ಜವಾಬ್ದಾರಿ ಎಲ್ಲರ ಮೇಲಿದೆ. ಜತೆಗೆ ಜನರಲ್ಲಿ ಅರಿವು ಮೂಡಿಸಬೇಕಿದೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ ಮಾತನಾಡಿ, ಎಸ್ಸಿ, ಎಸ್ಟಿ ವರ್ಗದ ಮೇಲಿನ ದೌರ್ಜನ್ಯ ಪ್ರಕರಣಗಳು ಚಾ.ನಗರ ಜಿಲ್ಲೆಯಲ್ಲೇ ಹನೂರು ಭಾಗದಲ್ಲಿ ಹೆಚ್ಚು ನಡೆಯುತ್ತಿದ್ದು, ಈ ವರ್ಷದಲ್ಲಿ 13 ಪ್ರಕರಣಗಳು ದಾಖಲಾಗಿವೆ. ಕೆಲವು ಪ್ರಕರಣಗಳು ಗ್ರಾಮ ಮಟ್ಟದಲ್ಲಿಯೇ ಮುಚ್ಚಿ ಹೋಗಿವೆ. ಆದ್ದರಿಂದ ದೌರ್ಜನ್ಯಗಳು ಕಂಡು ಬಂದರೆ ಅಧಿಕಾರಿಗಳಿಗೆ ತಿಳಿಸಬೇಕು. ಈ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಚನ್ನಾಲಿಂಗನಹಳ್ಳಿ ಜೇತವನ ಬುದ್ಧ ವಿಹಾರದ ಮನೋರಖ್ಖಿತ ಬಂತೇಜಿ ಮಾತನಾಡಿದರು. ಅಂಬೇಡ್ಕರ್ ವಿಚಾರವಾದಿ ಮಹದೇವಕುಮಾರ್ ವಿಚಾರ ಮಂಡಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಮ್ತಾಜ್ ಬಾನು, ಸದಸ್ಯ ಸಂಪತ್‌ಕುಮಾರ್, ದಸಂಸ ರಾಜ್ಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು, ಜಿಲ್ಲಾ ಸಂಚಾಲಕ ಮಾಂಬಳ್ಳಿ ಹಿಂಡಯ್ಯ, ತಾಲೂಕು ಸಂಚಾಲಕ ಮಾದೇಶ್, ಜಿಲ್ಲಾ ಸಂಚಾಲಕಿ ಭಾಗ್ಯಮ್ಮ, ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್, ಗ್ರಾಪಂ ಮಾಜಿ ಅಧ್ಯಕ್ಷ ರಾಮಲಿಂಗಂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net