

ಹುಬ್ಬಳ್ಳಿ: ಅಂತಾರಾಷ್ಟ್ರೀಯ ಮಹಿಳಾ ದಿನ ನಿಮಿತ್ತ ನಗರದ ಜೆಎಸ್‌ಎಸ್ ಸಕ್ರಿ ಕಾನೂನು ಕಾಲೇಜ್‌ನಲ್ಲಿ ಸೋಮವಾರ ಐಕ್ಯೂಎಸಿ ನಿಯೋಜಿತ ಭಾರತದಲ್ಲಿ ಮಹಿಳಾ ಸಂರಕ್ಷಣಾ ಕಾಯ್ದೆಗಳ ಉದ್ದೇಶ ಕುರಿತು ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಸಚಿವೆ ಡಾ. ರತ್ನಾ ಭರಮಗೌಡರ ಉದ್ಘಾಟಿಸಿ ಮಾತನಾಡಿ, ಇತಿಹಾಸದ ಪುಟಗಳನ್ನು ಮೆಲಕು ಹಾಕಿ ನೋಡಿದಾಗ ಮಹಿಳೆಯರು ತಮ್ಮ ಸಮಾನತೆ, ಸಬಲೀಕರಣ, ಸಶಕ್ತಿಕರಣದ ಕಡೆಗೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಇದರ ದ್ಯೋತಕವಾಗಿ ನಾವು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಿದ್ದೇವೆ ಎಂದರು.
ಆಧುನಿಕ ಜಗತ್ತಿನಲ್ಲಿ ಮಹಿಳೆಯು ತನ್ನ ಕುಟುಂಬದಲ್ಲಿಯೇ ಅತ್ಯಾಚಾರ, ವರದಕ್ಷಿಣೆ ಹತ್ಯೆ, ಮರ್ಯಾದಾ ಹತ್ಯೆ, ಹೆಣ್ಣುಭ್ರೂಣ ಹತ್ಯೆ ಹೀಗೆ ಹಲವಾರು ದೌರ್ಜನ್ಯಗಳನ್ನು ಸಹಿಸುತ್ತಿದ್ದಾಳೆ. ಇಂತಹ ದೌರ್ಜನ್ಯವನ್ನು ತಡೆಗಟ್ಟುವ ಕುರಿತು ಅರಿವು ಮತ್ತು ಜಾಗೃತಿ ಅತಿ ಅವಶ್ಯಕವಾಗಿದೆ ಎಂದರು.
ಕಾನೂನು ಕಾಲೇಜ್ ಪ್ರಾಚಾರ್ಯೆ ಡಾ. ರೂಪಾ ಇಂಗಳಹಳ್ಳಿ, ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಸಂಗೀತಾ ಮಾನೆ, ಸರಳಾ ಮಣಕವಾಡ, ನೂರಜಹಾನ್ ಕಿಲ್ಲೇದಾರ ಮಾತನಾಡಿದರು.
ದೀಪಾ ಪಾಟೀಲ, ಗೌರಮ್ಮ ಹೊಸಮನಿ, ಪೂರ್ಣಿಮಾ ಕುರಡಿಕೇರಿ, ಪ್ರೊ.ಶ್ರೀಶೈಲ ಮುಧೋಳ ಇತರರು ಇದ್ದರು.