ಎಚ್‌ಐವಿ, ಏಡ್ಸ್ ತಡೆಗಟ್ಟಲು ಅರಿವು ಅಗತ್ಯ

1003175396
ಶ್ರೀರಂಗಪಟ್ಟಣದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಎಚ್‌ಐವಿ, ಏಡ್ಸ್ ಕುರಿತು ಪ್ರಚಾರಾಂದೋಲನ ತರಬೇತಿ ಕಾರ್ಯಾಗಾರದಲ್ಲಿ ಜಾಗೃತಿ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಎಸ್.ಡಿ.ಬೆನ್ನೂರ್, ಡಾ.ವಿಜಯಲಕ್ಷ್ಮೀ, ಶಿವಕುಮಾರ್, ಮಿಲನಾ, ಜಿ.ಬಿ. ಹೇಮಣ್ಣ ಇತರರಿದ್ದರು.
Published on

ಶ್ರೀರಂಗಪಟ್ಟಣ: ಎಚ್‌ಐವಿ, ಏಡ್ಸ್ ಸೋಂಕು ತಡೆಗಟ್ಟಲು ಜನಸಾಮಾನ್ಯರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸುವುದು ಅಗತ್ಯ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ ಎನ್.ಕಾಂತರಾಜು ತಿಳಿಸಿದರು.

ಪಟ್ಟಣದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ ಸಹಯೋಗದಲ್ಲಿ ಆಶಾ ಕಾರ್ಯಕರ್ತೆಯರಿಗಾಗಿ ಶನಿವಾರ ಆಯೋಜಿಸಿದ್ದ ಎಚ್‌ಐವಿ, ಏಡ್ಸ್ ಕುರಿತು ಐಇಸಿ ಪ್ರಚಾರಾಂದೋಲನ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎಚ್‌ಐವಿ ಹರಡುವ ಮಾರ್ಗಗಳನ್ನು ಸರಿಯಾಗಿ ತಿಳಿದುಕೊಂಡರೆ ಈ ರೋಗ ನಿಯಂತ್ರಿಸಲು ಸಾಧ್ಯ. ಹಾಗೆಯೇ ಎಚ್‌ಐವಿ ಸೋಂಕಿತರನ್ನು ಗೌರವಯುತವಾಗಿ ಕಾಣಬೇಕು, ರೋಗ ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವುದರ ಜತೆಗೆ ರಕ್ತ ಪರೀಕ್ಷೆ ಮಾಡಿಸಿಕೊಂಡಾಗ ಮಾತ್ರ ರೋಗದ ಸ್ಥಿತಿಗತಿ ತಿಳಿಯಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಮೇಲ್ವಿಚಾರಕ ವಿನಾಯಕ ಮಾತನಾಡಿ, ತಾಲೂಕಿನಾದ್ಯಂತ ಎಚ್‌ಐವಿ, ಏಡ್ಸ್ ಕುರಿತು ಆಶಾ ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ಜನಜಾಗೃತಿ ಮೂಲಕ ಅರಿವು ಮೂಡಿಸುತ್ತಾರೆ. ಈ ನಿಟ್ಟಿನಲ್ಲಿ ಪ್ರತಿ ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಗೆ ಬರುವ ಮನೆಗಳಿಗೆ ತೆರಳಿ ಸೋಂಕಿನ ಸಂಬಂಧ ಅರಿವು ಮೂಡಿಸುವುದು, ಕರಪತ್ರ ಹಂಚುವುದು ಹಾಗೂ ಸಂಶಯವಿದ್ದಲ್ಲಿ ಪರೀಕ್ಷೆ ಮಾಡಿಸುವುದು, ಲೈಂಗಿಕ ಸಂಪರ್ಕ ಕಾಯಿಲೆ ಬಗ್ಗೆ ಅರಿವು, ಜತೆಗೆ ಏಡ್ಸ್ ಬಗ್ಗೆ ಇರುವ ಕಳಂಕ ಮತ್ತು ತಾರತಮ್ಯ ಹೋಗಲಾಡಿಸುವುದು ಆಂದೋಲನದ ಮುಖ್ಯ ಉದ್ದೇಶವಾಗಿರುತ್ತದೆ. ಆದ್ದರಿಂದ ಆಶಾ ಕಾರ್ಯಕರ್ತೆಯರು ಮನೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕೆಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್ ಮಾತನಾಡಿ, ಎಚ್‌ಐವಿ, ಏಡ್ಸ್ ಬಗ್ಗೆ ಮುಕ್ತವಾಗಿ ಮಾತನಾಡಬೇಕು. ಸಲಹೆಗಾಗಿ ಅಥವಾ ಅನುಮಾನ ಪರಿಹರಿಸಿಕೊಳ್ಳಲು ರಾಷ್ಟ್ರೀಯ ಉಚಿತ ಸಹಾಯವಾಣಿ ಸಂಖ್ಯೆ 1097ಕ್ಕೆ ಕರೆ ಮಾಡಿ ತಿಳಿದುಕೊಳ್ಳಬಹುದಾಗಿದೆ ಎಂದರು.

ಕಾರ್ಯಾಗಾರದಲ್ಲಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮೀ, ಸಂಪೂರ್ಣ ಸುರಕ್ಷಾ ಕೇಂದ್ರದ ಮ್ಯಾನೇಜರ್ ಶಿವಣ್ಣ, ಐವೈಡಿ ಜಿಲ್ಲಾ ಸಂಯೋಜಕ ಶಿವಕುಮಾರ್, ಐಸಿಟಿಸಿ ಆಪ್ತ ಸಮಾಲೋಚಕಿ ಮಿಲನಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಬಿ. ಹೇಮಣ್ಣ, ಜಿಲ್ಲಾ ಹಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಶ್ರೀನಿವಾಸ್ ಹಾಗೂ ತಾಲೂಕಿನ ಎಲ್ಲ ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net